ದೇಶದ ಟೆಕ್ ಕಂಪನಿಗಳಲ್ಲಿ ಭಾರೀ ಉದ್ಯೋಗ ಕಡಿತ ಆರಂಭವಾಗಿದೆ. ಸಾವಿರಾರು ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಆರ್ಥಿಕ ಸ್ಥಿತಿಗತಿಯ ಬದಲಾವಣೆ, ಕೃತಕ ಬುದ್ಧಿ (AI) ಅಳವಡಿಕೆ, ಮತ್ತು ತೀವ್ರ ವೆಚ್ಚ ನಿರ್ವಹಣೆಯಂತಹ ಕಾರಣಗಳಿವೆ. AI ಬದಲಾವಣೆಯಿಂದಾಗಿ TCS 12,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ, ಮಧ್ಯಮ ಮತ್ತು ಹಿರಿಯ ಮಟ್ಟದ ಸಿಬ್ಬಂದಿಗೆ ಭಾರಿ ಹೊಡೆತ ಬಿಳ್ಳಲಿದೆ.
ಹೌದು ಭಾರತದ ಅತಿದೊಡ್ಡ ಐಟಿ ಸೇವೆಗಳ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS), ತನ್ನ ಉದ್ಯೋಗಿಗಳನ್ನು ಸುಮಾರು ಶೇಕಡಾ 2 ರಷ್ಟು ಕುಗ್ಗಿಸಲು ಸಜ್ಜಾಗಿದೆ, ಈ ಕ್ರಮವು ಮುಂದಿನ ವರ್ಷದಲ್ಲಿ 12,000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯ ಕಾರ್ಯನಿರ್ವಾಹಕ ಕೆ. ಕೃತಿವಾಸನ್ ಅವರು ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.
ಕಂಪನಿಯು ಸಿಬ್ಬಂದಿಗಳ ಸಂಖ್ಯೆಯನ್ನು ಏಕೆ ಕಡಿತಗೊಳಿಸುತ್ತಿದೆ ಎಂದು ಕೇಳಿದಾಗ, ಉದ್ಯಮವು ಸ್ವತಃ ರೂಪಾಂತರಗೊಳ್ಳುತ್ತಿದೆ ಎಂದು ಕೃತಿವಾಸನ್ ವಿವರಿಸಿದರು. ಕೆಲಸ ಮಾಡುವ ವಿಧಾನಗಳು ಬದಲಾಗುತ್ತಿವೆ ಮತ್ತು ಪ್ರತಿಯೊಂದು ಕಂಪನಿಯು ಭವಿಷ್ಯಕ್ಕೆ ಸಿದ್ಧವಾಗಿರಬೇಕು ಮತ್ತು ಚುರುಕಾಗಿರಬೇಕು ಎಂದು ಅವರು ಹೇಳಿದರು.
ಮೊದಲೇ ಹೇಳಿದಂತೆ ಭಾರತದ ಟೆಕ್ ದೈತ್ಯ TCS ಕಂಪನಿ, ಇದೇ ವರ್ಷ 12,000 ನೌಕರರನ್ನು ಮನೆಗೆ ಕಳಿಸುವುದಾಗಿ ಭಾನುವಾರ ಹೇಳಿದೆ. ಇದರ ಆಸುಪಾಸಿನಲ್ಲೇ ಇಂಟೆಲ್ ಕಂಪನಿಯು 25,000, ಪ್ಯಾನಸಾನಿಕ್ 10,000, ಮೈಕ್ರೋಸಾಫ್ಟ್ 6500, ಮೆಟಾ 3600, ಅಮೆಜಾನ್ 14000, ಐಬಿಎಂ 8000, ಗೂಗಲ್ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್‌ಪಿ 6000, ನಿಸ್ಸಾನ್ 20,000, ಸ್ಟಾರ್ ಬಕ್ಸ್ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ. ಜತೆಗೆ ವಾಲ್‌ಮಾರ್ಟ್, ಬಾಷ್‌ನಂತಹ ಕಂಪನಿಗಳು ಸಹ ವೆಚ್ಚ ಕಡಿತ ಕಾರಣಗಳಿಂದಾಗಿ ಸಿಬ್ಬಂದಿ ಸಂಖ್ಯೆ ಇಳಿಸಲು ನಿರ್ಧರಿಸಿವೆ.
ವರದಿ : ಲಾವಣ್ಯ ಅನಿಗೋಳ




