ಜಾರ್ಜಿಯಾದಲ್ಲಿ ನಡೆದ ಫೈನಲ್‌ನಲ್ಲಿ 19 ವರ್ಷದ ದಿವ್ಯಾ ದೇಶಮುಖ್ ಚೆಸ್ ವಿಶ್ವಕಪ್ ಗೆದ್ದಿದ್ದಾರೆ. ದಿವ್ಯಾ ದೇಶಮುಖ್ – ಕೇವಲ 19ನೇ ವಯಸ್ಸಿನಲ್ಲಿ, ಜಾರ್ಜಿಯಾದ ಬಟುಮಿಯಲ್ಲಿ ನಡೆದ 2025ರ ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಲೆಜೆಂಡರಿ ಆಟಗಾರ್ತಿ ಕೊನೆರು ಹಂಪಿ ಅವರನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆಯನ್ನು ದಿವ್ಯಾ ನಿರ್ಮಿಸಿದ್ದಾರೆ.
ಈ ವರ್ಷದ ವಿಶ್ವಕಪ್ ಫೈನಲ್ ವಿಶೇಷವಾಗಿದ್ದು, ಎರಡು ಭಾರತೀಯ ಆಟಗಾರ್ತಿಯರ ನಡುವೆ ಪಂದ್ಯ ನಡೆದಿದೆ. ಒಬ್ಬರು ಅನುಭವಿ, ವಿಶ್ವದ ಮಟ್ಟದ ಆಟಗಾರ್ತಿ – ಕೊನೆರು ಹಂಪಿ. ಮತ್ತೊಬ್ಬರು ಯುವ ಪ್ರತಿಭೆ, ಚುರುಕಾಗಿ ಬೆಳೆಯುತ್ತಿರುವ ಚೆಸ್ ತಾರೆ – ದಿವ್ಯಾ ದೇಶಮುಖ್.
ಫೈನಲ್‌ನ ಮೊದಲ ಎರಡು ಕ್ಲಾಸಿಕಲ್ ಪಂದ್ಯಗಳು ಡ್ರಾ ಆಗಿದ್ದವು. ಎರಡೂ ಆಟಗಾರ್ತಿಯರೂ ಒಂದರ ಮೇಲೊಂದು ಸರಿಯಾಗಿ ಆಟವಾಡುತ್ತಿದ್ದರು. ಪಂದ್ಯ ಟೈ-ಬ್ರೇಕ್ ಗೆ ಸಾಗಿದಾಗ, ಎಲ್ಲರೂ ಕೊನೆರು ಹಂಪಿಗೆ ಹೆಚ್ಚಿನ ಭರವಸೆ ಇಟ್ಟಿದ್ದರು. ಆದ್ರೆ ದಿವ್ಯಾ ಪಂದ್ಯದಲ್ಲಿ ತೀವ್ರ ಪೈಪೋಟಿಯಲ್ಲಿ ಮುನ್ನಡೆ ಸಾಧಿಸಿದರು.
ದಿವ್ಯಾ ದೇಶಮುಖ್ ಈ ಪ್ರಶಸ್ತಿಯೊಂದಿಗೆ ತಾವು ಭಾರತೀಯ ಮಹಿಳಾ ಚೆಸ್ ಇತಿಹಾಸದಲ್ಲಿ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ, ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್, ಹೀಗೆ ಹಲವು ಹೆಗ್ಗಳಿಕೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.
ಹಾಗಾದ್ರೆ ಯಾರು ದಿವ್ಯಾ ದೇಶಮುಖ್?
ಮಹಾರಾಷ್ಟ್ರದ ನಾಗ್ಪುರದ ದಿವ್ಯಾ ದೇಶಮುಖ್ ಮರಾಠಿ ಕುಟುಂಬದಲ್ಲಿ ಜನಿಸಿದ್ದಾರೆ. ಇವರ ಪೋಷಕರು ವೈದ್ಯರಾಗಿದ್ದಾರೆ. ಭವನ್ಸ್ ಭಗವಾನ್‌ದಾಸ್ ಪುರೋಹಿತ ವಿದ್ಯಾ ಮಂದಿರಕ್ಕೆ ಸೇರಿದ್ದ ಇವರು ಬಾಲ್ಯದಲ್ಲೇ ಚೆಸ್ ಆಡಲು ಆರಂಭಿಸಿದ್ದರು.
2022 ರ ಮಹಿಳಾ ಭಾರತೀಯ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಇವರು 2021 ರಲ್ಲಿ ಭಾರತದ 21 ನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಕಿರೀಟವನ್ನು ಪಡೆದಿದ್ದರು. 2020 ರ FIDE ಆನ್‌ಲೈನ್ ಒಲಿಂಪಿಯಾಡ್‌ನಲ್ಲಿ ಭಾರತ ಚಿನ್ನ ಗೆದ್ದಿತ್ತು. ಈ ತಂಡದಲ್ಲಿ ದಿವ್ಯಾ ಭಾಗಿಯಾಗಿದ್ದರು. 2022ರ ಚೆಸ್ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ವರದಿ : ಲಾವಣ್ಯ ಅನಿಗೋಳ




