ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಿಎಂ ಕುರ್ಚಿ ಕದನಕ್ಕೆ ಬ್ರೇಕ್ ಹಾಕಲು, ಕಾಂಗ್ರೆಸ್ ಹೈಕಮಾಂಡ್ ಸ್ಟ್ರ್ಯಾಟಜಿ ಮಾಡಿತ್ತು. ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಂಡು, ಡಿಕೆಶಿಗೆ ರಾಜ್ಯದ ಚುಕ್ಕಾಣಿ ವಹಿಸುವ ಇರಾದೆ ಇತ್ತಂತೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರು ರೋಚಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸೆಪ್ಟೆಂಬರ್ ಕ್ರಾಂತಿ ಶುರುವಾದ ಬಳಿಕ, ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲವೇ ಸೃಷ್ಟಿಯಾಗಿತ್ತು. ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು, ಹೈಕಮಾಂಡ್ ವರಿಷ್ಠರು ಸ್ಟ್ರ್ಯಾಟಜಿಯೊಂದನ್ನು ರೂಪಿಸಿದ್ರು.
ಹೀಗಾಗಿಯೇ ಸಿದ್ದರಾಮಯ್ಯರನ್ನು ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರನ್ನಾಗಿ ಮಾಡಲಾಗಿತ್ತು. ಬಳಿಕ ಸಿದ್ದು, ಡಿಕೆಶಿ ಇಬ್ಬರನ್ನೂ ದಿಲ್ಲಿಗೆ ಕರೆಸಿಕೊಂಡಿದ್ದಾರೆ. ಬಳಿಕ ಅದೇನಾಯ್ತೋ ಏನೋ, ಸಿದ್ದರಾಮಯ್ಯ, ತುರ್ತು ಮಾಧ್ಯಮಗೋಷ್ಠಿ ಕರೆದು, ರಾಷ್ಟ್ರರಾಜಧಾನಿಯಲ್ಲಿ ಮುಂದಿನ 5 ವರ್ಷ ನಾನೇ ಸಿಎಂ ಅಂತಾ ಬಹಿರಂಗವಾಗಿ ಘೋಷಿಸಿದ್ರು.
ಇದೇ ವಿಚಾರವಾಗಿ ಸತೀಶ್ ಜಾರಕಿಹೊಳಿ, ಪಕ್ಷದೊಳಗೆ ನಡೆದಿದ್ದ ಆಂತರಿಕ ವಿಚಾರವೊಂದನ್ನ ಬಹಿರಂಗಪಡಿಸಿದ್ದಾರೆ. ಸಿದ್ದರಾಮಯ್ಯ-ಡಿಕೆಶಿ ಕಚ್ಚಾಡುವುದು ಬೇಡವೆಂದೇ, ಸೋನಿಯಾ ಗಾಂಧಿ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡಿದ್ರು. ರಾಷ್ಟ್ರಮಟ್ಟಕ್ಕೆ ಸಿದ್ದರಾಮಯ್ಯ ಬರಲಿ, ಶಿವಕುಮಾರ್ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಲಿ ಅಂತ ಹೇಳಿದ್ರು. ಆದರೆ ವಾಪಸ್ ಕಳಿಸುವಾಗ ಸಿದ್ದರಾಮಯ್ಯರೇ ಸಿಎಂ ಆಗಿ ಮುಂದುವರೆಯಲಿ ಅಂತಾ ಹೇಳಿದ್ದಾರೆ. ಹೀಗಂತ ಸತೀಶ್ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಇದೇ ಆಗಸ್ಟ್ 1ರಂದು ಸಿದ್ದರಾಮಯ್ಯ ಮತ್ತೆ ದಿಲ್ಲಿಗೆ ಹೋಗುತ್ತಿದ್ದಾರೆ. ಈ ಸಲವಾದ್ರೂ, ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ಎರಡೂವರೆ ವರ್ಷಗಳ ಅವಧಿ ಮುಗಿಯಲು, ಸ್ವಲ್ಪವೇ ಸಮಯವಿದೆ. ಹೀಗಾಗೇ ಸಿದ್ದು ಟೆನ್ಶನ್ ಆದಂತೆ ಕಾಣಿಸ್ತಿದೆ. ಕಾರ್ಯಕ್ರಮಗಳ ನೆಪದಲ್ಲಿ ಪದೇ ಪದೇ ದೆಹಲಿ ಪ್ರವಾಸ ಕೈಗೊಳ್ಳುತ್ತಲೇ ಇದ್ದಾರೆ. ಇತ್ತ ಡಿಕೆಶಿ ಮಾತ್ರ ಮೌನ ತಾಳಿದ್ದು, ಬದಲಾವಣೆಯ ಸೂಚನೆಯಂತೆ ಕಾಣಿಸ್ತಿದೆ.

