ಇದೇ ಆಗಸ್ಟ್ 5ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬರ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ಅದರಲ್ಲೂ ಕರ್ನಾಟಕದಲ್ಲೇ ಚುನಾವಣಾ ಅಕ್ರಮ ಆಗಿದೆ ಅಂತಾ, ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಮತಗಳ್ಳತನ ವಿರುದ್ಧ ಕಾಂಗ್ರೆಸ್ ಹೋರಾಟ ಹಮ್ಮಿಕೊಂಡಿದೆ.
ರಾಹುಲ್ ಗಾಂಧಿ ಅವರು ಮತಗಳ್ಳತನದ ವಿರುದ್ಧದ ತಮ್ಮ ಹೋರಾಟವನ್ನು ಕರ್ನಾಟಕದಿಂದಲೇ ಶುರು ಮಾಡ್ತಿದ್ದಾರೆ. ಜೊತೆಗೆ, ಕೆಲ ದಿನಗಳ ಹಿಂದೆ ನಡೆದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಸಮಿತಿಯ ಸಭೆಯನ್ನೂ, ಕರ್ನಾಟಕದಲ್ಲೇ ನಡೆಸಲಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ಕಾಂಗ್ರೆಸ್ಸಿಗೆ ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಅನ್ನೋದು ಮಹತ್ವವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲವಾದ ಸಂಘಟನೆ ಇದೆ. ಪ್ರಭಾವಿ ನಾಯಕರಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಇರೋದ್ರಿಂದ, ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ಸಿಗಲಿದೆ. ರಾಷ್ಟ್ರಮಟ್ಟದ ಹೋರಾಟಕ್ಕೆ ಕರ್ನಾಟಕ ವೇದಿಕೆಯಾಗಲಿದೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕವನ್ನೇ ನೆಚ್ಚಿಕೊಂಡಿದೆ.
ದೇಶದ 3 ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ, ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಜಾರ್ಖಂಡ್‌ನಲ್ಲಿ ಜೆಎಂಎಂ ಜೊತೆ ಮೈತ್ರಿ ಸರ್ಕಾರದ ಪಾಲುದಾರನಾಗಿದೆ. ಹೀಗಾಗಿ, ಸದ್ಯದ ಮಟ್ಟಿಗೊಂತು ಕರ್ನಾಟಕಕ್ಕೆ, ಹೈಕಮಾಂಡ್ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ.
ಪಕ್ಷ ಸಂಘಟನೆಯನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಉತ್ತಮ ಬಲ ಇದೆ. ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿಎಂ ಸಿದ್ದರಾಮಯ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಿರಿತನ, ಅನುಭವ ಇದೆ. ತಮ್ಮದೇ ಶೈಲಿಯ ವಾಕ್ಚಾತುರ್ಯ, ಕಾರ್ಯವೈಖರಿಯಿಂದ, ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿದ್ದಾರೆ. ಒಕ್ಕಲಿಗ ನಾಯಕರಾಗಿರಾಗಿರುವ ಡಿಕೆಶಿ, ಶಿಸ್ತುಬದ್ಧ ಸಂಘಟನೆಯ ಮೂಲಕ, ರಾಜ್ಯದಲ್ಲಿ ಹಿಡಿತ ಹೊಂದಿದ್ದಾರೆ. ಎಐಸಿಸಿ ಅಧ್ಯಕ್ಷ, ದಲಿತ ಸಮುದಾಯದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ, ಕರ್ನಾಟಕದವರು.
ಇದಿಷ್ಟೇ ಅಲ್ಲ, ರಾಜ್ಯದಲ್ಲಿ ವಿಪಕ್ಷ ಸ್ಥಾನದಲ್ಲಿದ್ದಾಗಲೂ, ಅಗತ್ಯ ಸಂದರ್ಭಗಳಲ್ಲಿ ಹೈಕಮಾಂಡಿಗೆ ನೆರವಾಗಿದ್ರು. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ, ರಾಷ್ಟ್ರೀಯ ನಾಯಕರು ಕರ್ನಾಟಕದ ನೆರವು ಕೋರಿದ್ರು. ಈ ವೇಳೆ ಶಾಸಕರ ರಕ್ಷಣೆಯಲ್ಲಿ, ಡಿಕೆಶಿ ಕಾರ್ಯವೈಖರಿ ಭಾರೀ ಗಮನ ಸೆಳೆದಿತ್ತು.
ಎಲ್ಲಾ ಆಯಾಮಗಳಿಂದಲೂ ಕರ್ನಾಟಕವೇ, ಹೈಕಮಾಂಡ್ ಪಾಲಿಗೆ ಸೂಕ್ತವಾದ ಜಾಗವಾಗಿದೆ. ಹೀಗಾಗಿ, ಕರ್ನಾಟಕದಿಂದಲೇ ಹೋರಾಟಕ್ಕೆ ಚಾಲನೆ ನೀಡಬೇಕೆಂದು, ಹೈಕಮಾಂಡ್ ನಿರ್ಧರಿಸಿದೆ.