ಶ್ರಾವಣ ಮಾಸದ ಆರಂಭದೊಂದಿಗೆ ತಿರುಪತಿ ತಿಮ್ಮಪ್ಪನಿಗೆ ಭಕ್ತರು ಚಿನ್ನ ಮತ್ತು ಇತರ ರೂಪಗಳಲ್ಲಿ 5ಕೋಟಿ ರೂ.ಗೂ ಅಧಿಕ ದೇಣಿಗೆ ನೀಡಿದ್ದಾರೆ. ಹೌದು ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಲಕ್ಷಾಂತರ ಭಕ್ತರು ಪ್ರತಿದಿನ ಈ ತೀರ್ಥಕ್ಷೇತ್ರಕ್ಕೆ ಬಂದು ತಿಮ್ಮಪ್ಪನ ದರ್ಶನ ಪಡೆದು ದೇಣಿಗೆಯನ್ನು ಸಲ್ಲಿಸುತ್ತಾರೆ. ವಿಶೇಷವಾಗಿ ಶ್ರಾವಣ ಮಾಸದಂದು ಭಕ್ತರ ಸಂಖ್ಯೆ ಹಾಗೂ ಭಕ್ತಿಯ ಪ್ರಮಾಣವೂ ಹೆಚ್ಚಾಗುತ್ತದೆ.
ಈ ವರ್ಷವೂ ಭಕ್ತರು ತಮ್ಮ ಭಕ್ತಿ ಪ್ರದರ್ಶಿಸುತ್ತಾ, ದೇವಾಲಯದ ಹುಂಡಿಗೆ ಹಾಗೂ ಟ್ರಸ್ಟ್‌ಗೆ ಭಾರೀ ದೇಣಿಗೆಗಳನ್ನು ನೀಡಿದ್ದಾರೆ. ಒಂದು ವಾರದಲ್ಲಿ ಬಂದ ದೇಣಿಗೆ ಒಟ್ಟು ₹5.6 ಕೋಟಿ ರೂಪಾಯಿ. ಅದರಲ್ಲಿ 3 ಕೋಟಿ ರೂ. ಮೌಲ್ಯದ ವಸತಿ ಆಸ್ತಿ ಮತ್ತು IRS ಅಧಿಕಾರಿ YVSS ಭಾಸ್ಕರ್ ರಾವ್ ಅವರಿಂದ 66 ಲಕ್ಷ ರೂ. ನಗದು ಹೆಚ್ಚುವರಿಯಾಗಿ ಸೇರಿದೆ.
ನಿವೃತ್ತ IRS ಅಧಿಕಾರಿ ಭಾಸ್ಕರ್ ರಾವ್ ಎನ್ನುವವರು ಸುಮಾರು 3 ಕೋಟಿ ರೂ. ಮೌಲ್ಯದ ತಮ್ಮ ಆಸ್ತಿಯನ್ನು ತಿರುಪತಿ ತಿಮ್ಮಪ್ಪನಿಗೆ ದಾನ ಮಾಡಿದ್ದಾರೆ. ಜೊತೆಗೆ ಚೆನ್ನೈ ಮೂಲದ ಉದ್ಯಮವೊಂದು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುಮಾರು 2.4 ಕೋಟಿ ಮೌಲ್ಯದ 2.5 ಕೆಜಿ ತೂಕದ ಚಿನ್ನದ ಶಂಖ ಮತ್ತು ಚಕ್ರವನ್ನು ದಾನ ಮಾಡಿದ್ದಾರೆ. ಈ ಎಲ್ಲಾ ದೇಣಿಗೆಗಳನ್ನು ಟಿಟಿಡಿಯ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ.
ಶ್ರಾವಣ ಮಾಸದ ಆರಂಭದಲ್ಲೇ ಈ ಮಟ್ಟದ ದೇಣಿಗೆಗಳು ದೇವಾಲಯದ ವೈಭವವನ್ನು ಮತ್ತು ಭಕ್ತರ ಅಪಾರ ನಂಬಿಕೆಯನ್ನು ತೋರಿಸುತ್ತವೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ರು ಕೂಡ ವರ್ಷದ ಮೊದಲಾರ್ಧದಲ್ಲಿ 773 ಕೋಟಿ ರೂಪಾಯಿಗಳಷ್ಟು ಮೌಲ್ಯದ 1,000 ಕಿಲೋಗ್ರಾಂ ಚಿನ್ನವನ್ನು ತಿರುಪತಿಗೆ ದಾನ ಮಾಡಲಾಗಿದೆ. ಇಂದಿಗೂ ದೇವಾಲಯದಲ್ಲಿ 11,000 ಕಿಲೋಗ್ರಾಂಗಳಿಗಿಂತ ಹೆಚ್ಚು ಚಿನ್ನದ ನಿಕ್ಷೇಪಗಳಿವೆ.