ಕರೆ ಕೊಟ್ಟಂತೆ ಆಗಸ್ಟ್ 5ರಿಂದಲೇ, ಸಾರಿಗೆ ನೌಕರರ ಮುಷ್ಕರ ಆರಂಭವಾಗಿದೆ. ಎಸ್ಮಾ ಕಾಯ್ದೆ ಪ್ರಯೋಗ, ರಜೆ ರದ್ದು, ವೇತನ ಕಡಿತಗೊಳಿಸುವ ಬೆದರಿಕೆಗಳಿಗೂ ಜಗ್ಗಿಲ್ಲ. ಒಂದೇ ಒಂದು ದಿನ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಹೇಳಿದ್ರೂ, ಸಾರಿಗೆ ನೌಕರರ ಒಕ್ಕೂಟ ತನ್ನ ಪಟ್ಟು ಬಿಟ್ಟಿಲ್ಲ.
ಆಗಸ್ಟ್ 4ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, 38 ತಿಂಗಳಿಗೆ ಬದಲಾಗಿ 14 ತಿಂಗಳ ಬಾಕಿ ಪಾವತಿಸುವುದಾಗಿ ಹೇಳಿದ್ದಾರೆ. ಆದ್ರೆ, ನೌಕರರ ಒಕ್ಕೂಟ ಇದಕ್ಕೆ ಒಪ್ಪಿಲ್ಲ. ನಾಲ್ಕೂ ನಿಗಮಗಳಲ್ಲಿ ಒಟ್ಟು 25,528 ಬಸ್‌ಗಳು ಇವೆ. 1.04 ಲಕ್ಷ ನೌಕರರು ಇದ್ದಾರೆ. ಪ್ರತಿನಿತ್ಯ 1.17 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಇದೀಗ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತದಿಂದಾಗಿ, ಪ್ರಯಾಣಿಕರು ಪರದಾಡುವಂತಾಗಿದೆ.
ನೌಕರರ ಮುಷ್ಕರಕ್ಕೆ ಪ್ರತಿಯಾಗಿ, ಸಾರಿಗೆ ಇಲಾಖೆಯೂ ಕೆಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲೆಕ್ಟ್ರಿಕ್ ಬಸ್‌ಗಳ ಓಡಾಟ, 11 ಸಾವಿರ ಖಾಸಗಿ ಬಸ್‌ಗಳ ಸಂಚಾರಕ್ಕೆ ಅನುಮತಿ, ಗುತ್ತಿಗೆ ಆಧಾರದ ಚಾಲಕರನ್ನು ಬಳಕೆ ಮಾಡಿಕೊಳ್ತಿದೆ. ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನೇ, ಖಾಸಗಿ ಬಸ್‌ಗಳೂ ಪಡೆಯಲು ಸೂಚಿಸಿದೆ.
ಸಾರಿಗೆ ನೌಕರರ ಮುಷ್ಕರ ವಿರೋಧಿಸಿ ವಕೀಲ ಅಮೃತೇಶ್, ಆಗಸ್ಟ್ 4ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. 2 ದಿನ ಮುಷ್ಕರ ಮುಂದೂಡುಲು ಆದೇಶಿಸುವಂತೆ, ಸಾರಿಗೆ ಇಲಾಖೆ ವಕೀಲರು ಮನವಿ ಮಾಡಿದ್ರು. ಆದ್ರೆ 1 ದಿನದ ಮಟ್ಟಿಗೆ ಮುಷ್ಕರ ಮುಂದೂಡಲು, ಹೈಕೋರ್ಟ್ ಆದೇಶಿಸಿತ್ತು. ಆದ್ರೂ ನೌಕರರು ಪ್ರತಿಭಟನೆ ಮಾಡದೇ, ಕೇವಲ ಬಸ್ ಓಡಿಸೋದನ್ನ ನಿಲ್ಲಿಸಿದ್ದಾರೆ. ಇಂದು ಮತ್ತೆ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ಕೈಗೊಳ್ಳುತ್ತಿದೆ. ಕೋರ್ಟ್ ಆದೇಶದ ಮೇಲೆ, ಸಾರಿಗೆ ನೌಕರರ ಮುಷ್ಕರದ ಭವಿಷ್ಯ ನಿಂತಿದೆ.