RJD ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಹಿರಿಯ ಪುತ್ರ, ಹೊಸ ಮೈತ್ರಿಕೂಟ ರಚಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ, 5 ಸಣ್ಣ ಪಕ್ಷಗಳ ಮೈತ್ರಿಕೂಟ ರಚಿಸುವುದಾಗಿ, ತೇಜ್ ಪ್ರತಾಪ್ ಹೇಳಿದ್ದಾರೆ.
2025ರ ಮೇ 4ರಂದು ತೇಜ್ ಪ್ರತಾಪ್ ಯಾದವ್, ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ರು. ಅನುಷ್ಕಾ ಯಾದವ್ ಜೊತೆಗಿನ, 12 ವರ್ಷಗಳ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ರು. ಅನುಷ್ಕಾ ಜೊತೆಗಿನ ಫೋಟೋ, ವೀಡಿಯೋ ಭಾರೀ ವೈರಲ್ ಆಗಿತ್ತು. ಇದು ಲಾಲೂ ಪ್ರಸಾದ್ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಬಳಿಕ ಆರ್‌ಜೆಡಿಯಿಂದ 6 ವರ್ಷಗಳ ಕಾಲ, ತೇಜ್ ಪ್ರತಾಪ್‌ನನ್ನ ಉಚ್ಛಾಟನೆ ಮಾಡಲಾಗಿತ್ತು.
ಬಳಿಕ, ಕೌಟುಂಬಿಕ ಕಲಹಗಳ ಮಧ್ಯೆ, ಟೀಂ ತೇಜ್ ಪ್ರತಾಪ್ ಯಾದವ್ ಪ್ರಾರಂಭವಾಯ್ತು. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಮಹುವಾದಿಂದ ಸ್ವತಂತ್ರ್ಯವಾಗಿ ಸ್ಪರ್ಧಿಸೋದಾಗಿ ಘೋಷಿಸಿದ್ದಾರೆ. ಆಗಸ್ಟ್ 5ರಂದು ನಡೆದ ಸುದ್ದಿಗೋಷ್ಠಿಯಲ್ಲಿ, 5 ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಕಾಣಿಸಿಕೊಂಡಿದ್ದಾರೆ.
ಇದೇ ವೇಳೆ ವಿಕಾಸ್ ವಂಚಿತ್ ಇನ್ಸಾನ್ ಪಕ್ಷ, ಭೋಜ್‌ಪುರಿ ಜನ ಮೋರ್ಚಾ, ಪ್ರಗತಿಶೀಲ ಜನ ಪಕ್ಷ, ವಾಜಿಬ್ ಅಧಿಕಾರ್ ಪಕ್ಷ, ಸಂಯುಕ್ತ ಕಿಸಾನ್ ವಿಕಾಸ್ ಪಕ್ಷಗಳನ್ನು ಸೇರಿಸಿ, ಮೈತ್ರಿಕೂಟ ರಚಿಸುತ್ತಿರುವುದಾಗಿ ಹೇಳಿದ್ದಾರೆ.
ಇನ್ನು, ಜನ ನನ್ನನ್ನು ಗೇಲಿ ಮಾಡಲು ಸ್ವತಂತ್ರರು. ನಾನು ಮಾತ್ರ ನನ್ನದೇ ಹಾದಿಯಲ್ಲಿ ಸಾಗುತ್ತಿದ್ದೇನೆ. ಬಿಹಾರದ ಸಂಪೂರ್ಣ ಪರಿವರ್ತನೆಗಾಗಿ, ಈ ಮೈತ್ರಿಕೂಟ ಒಟ್ಟಾಗಿ ಮುಂದುವರೆಯುತ್ತದೆ. ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಕನಸುಗಳನ್ನು ನನಸಾಗಿಸುವ ಭರವಸೆ ನೀಡುತ್ತೇವೆ. ಜನರು ನಮಗೆ ಆದೇಶ ನೀಡಿದ್ರೆ, ನಾವು ರಾಜ್ಯದ ಅಭಿವೃದ್ಧಿಯತ್ತ ಕೆಲಸ ಮಾಡುತ್ತೇವೆ ಅಂತಾ ಹೇಳಿದ್ದಾರೆ.
ಒಟ್ನಲ್ಲಿ 1977ರಿಂದಲೂ ನೀರು ಕುಡಿದಷ್ಟೇ ಸುಲಭವಾಗಿ ರಾಜಕೀಯ ಮಾಡುವ ಲಾಲೂಪ್ರಸಾದ್‌ಗೆ, ಹಿರಿಯ ಪುತ್ರ ತೇಜ್ ಪ್ರತಾಪ್ ಸೆಡ್ಡು ಹೊಡೆದಿದ್ದಾರೆ. ಹೊಸ ಮೈತ್ರಿಕೂಟ ರಚನೆ ಮೂಲಕ, ಬಿಹಾರ ರಾಜಕೀಯದಲ್ಲಿ ತಮ್ಮದೇ ದಾಳ ಉರುಳಿಸಿದ್ದಾರೆ.