ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ, ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 50ರಿಂದ 60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ, ಗುಡುಗು ಸಹಿತ ವರುಣ ಆರ್ಭಟ ಹೆಚ್ಚಾಗಲಿದೆ. ಗಂಟೆಗೆ 30ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಅಂತಾ, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಸೇರಿ, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮನೆಗಳು ಕುಸಿದು ನೆಲೆ ಇಲ್ಲದೇ ಜನರು ಕಂಗಾಲಾಗಿದ್ದಾರೆ. ಮರಗಳು ಧರೆಗುರುಳಿದ್ದು ವಿದ್ಯುತ್ ಲೈನ್‌ಗಳಿಗೆ ಹಾನಿಯಾಗಿ, ಕತ್ತಲೆಯಲ್ಲಿ ಜನರು ಕಾಲ ಕಳೆಯುವಂತಾಗಿದೆ.
ವಿಜಯಪುರದಲ್ಲಿ ಹೊಳೆಯಲ್ಲಿ ಸಿಲುಕಿದ್ದ ಬೈಕ್ ಸವಾರನನ್ನ, ಸ್ಥಳೀಯರು ಬಚಾವ್ ಮಾಡಿದ್ದಾರೆ. ಗುಂಡಬಾಳ ನದಿ ಪ್ರವಾಹಕ್ಕೆ ಹಳ್ಳಿಗಳು ಮುಳುಗಡೆಯಾಗಿದೆ. ಬಳ್ಳಾರಿಯ ನಾರಿಹಳ್ಳ ಡ್ಯಾಂನಿಂದ ಹೊರಹರಿವು ಹೆಚ್ಚಾಗಿದ್ರಿಂದ, 200 ಎಕರೆಯಲ್ಲಿದ್ದ ಮೆಕ್ಕೆಜೋಳ, ಹತ್ತಿ, ಭತ್ತದ ಬೆಳೆ ನಾಶವಾಗಿದೆ. ಚಿತ್ರದುರ್ಗದಲ್ಲಿ ಮಳೆ ನೀರಲ್ಲಿ ಈರುಳ್ಳಿ ಬೆಳೆ ಕೊಚ್ಚಿ ಹೋಗಿದ್ದು, ಅನ್ನದಾತ ಕಂಗಾಲಾಗಿದ್ದಾನೆ.