Saturday, August 9, 2025

Latest Posts

6 ಸಾವಿರ ರೈತರ ಆಕ್ರೋಶ : ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ

- Advertisement -

ತುಮಕೂರು ತಾಲ್ಲೂಕಿನಲ್ಲಿ ಬಗರ್ ಹುಕುಂ ಅರ್ಜಿಗಳನ್ನು ತಿರಸ್ಕರಿಸಿರುವ ಕ್ರಮ ರೈತರಲ್ಲಿ ಆಕ್ರೋಶ ಉಂಟುಮಾಡಿದ್ದು, ಈ ಸಂಬಂಧ 6 ಸಾವಿರ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಶಾಸಕ ಬಿ. ಸುರೇಶ್‌ಗೌಡ ಎಚ್ಚರಿಸಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯ ನಂತರ ಮಾತನಾಡಿದ ಶಾಸಕರು, ಫಾರಂ 57ರಲ್ಲಿ ಸಲ್ಲಿಕೆಯಾಗಿರುವ 6 ಸಾವಿರ ಅರ್ಜಿಗಳಲ್ಲಿ ಕೇವಲ 27 ಅರ್ಜಿಗಳನ್ನು ಮಾತ್ರ ಅರ್ಹವೆಂದು ಪರಿಗಣಿಸಲಾಗಿದೆ. ಉಳಿದ ಅರ್ಜಿಗಳನ್ನು ತಿರಸ್ಕರಿಸಿರುವುದು ಸಂಪೂರ್ಣ ಅನ್ಯಾಯ ಎಂದು ದೂರಿದರು.

ಶ್ರೇಷ್ಠ ಕೃಷಿಯ ಅನುಭವ ಹೊಂದಿರುವ ರೈತರು ಎರಡು ಮೂರು ದಶಕಗಳಿಂದ ಜಮೀನು ಉಳುಮೆ ಮಾಡಿ ಬೆಳೆ ಬೆಳೆಸುತ್ತಿರುವವರ ಅರ್ಜಿಗಳನ್ನು ತಿರಸ್ಕರಿಸಿರುವುದರಿಂದ ರೈತರ ಜೀವನದಲ್ಲೇ ಅಪಾಯವಿದೆ ಎಂದು ಹೇಳಿದರು. ತಮ್ಮ ̄೨೦೦೮ – ೨೦೧೩ರ ಶಾಸಕವಧಿಯಲ್ಲಿ ನೀಡಲಾದ ಸಾಗುವಳಿ ಚೀಟಿಗಳಿಗೆ ಇನ್ನೂ ಖಾತೆ ಮಾಡಿಕೊಡದೆ ನಾನಾ ತಕರಾರುಗಳನ್ನು ನಿರ್ಮಿಸಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿದಿನ ರೈತರು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಕೈಕಟ್ಟಿ ನಿಂತು ಬೇಡಿಕೆ ಮುಂದಿಟ್ಟರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಈ ನಿರ್ಲಕ್ಷ್ಯ ಮುಂದುವರಿದರೆ, ಅಧಿವೇಶನದ ವೇಳೆ ಸಾವಿರಾರು ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು, ಎಂದು ಎಚ್ಚರಿಸಿದರು. ಬಗರ್ ಹುಕುಂ ಜಮೀನನ್ನು ದಶಕಗಳಿಂದ ಉಳುಮೆ ಮಾಡುತ್ತಿರುವವರ ಅರ್ಜಿ ತಿರಸ್ಕರಿಸುವುದರಿಂದ ಗ್ರಾಮೀಣ ಕೃಷಿಕರ ಮೇಲೆ ಅಪಾರ ತೊಂದರೆ ಉಂಟಾಗಿದೆ. ಇದನ್ನು ಸರಿಪಡಿಸಲು ತಕ್ಷಣವೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಮತ್ತು ಶಾಸಕರ ಒತ್ತಾಯವಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss