Saturday, August 9, 2025

Latest Posts

ಹಾಸನಕ್ಕೆ ಹೊಸ ಸಾರಥಿ? : ಕೃಷ್ಣ ಬೈರೇಗೌಡರಿಗೆ ಹಾಸನ ಸಾರಥ್ಯ?

- Advertisement -

ಒಲ್ಲದ ಮನಸ್ಸಿನಿಂದಲೇ ಹಾಸನ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದ ಕೆ.ಎನ್. ರಾಜಣ್ಣ ಅವರಿಗೆ ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆ ನೀಡಲಾಗಿದೆಯೇ? ಅವರ ಬದಲು ಕೃಷ್ಣ ಬೈರೇಗೌಡರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆಯೇ ಎನ್ನುವ ಚರ್ಚೆಗಳು ಜೋರಾಗಿವೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಬದಲು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಜವಾಬ್ದಾರಿ ನೀಡಲಾಗಿದ್ದು, ಇಂತಹ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವರನ್ನು ಬದಲಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಹುಡಾ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಕಾರ್ಯಕರ್ತರ ಅಸಮಾಧಾನ ಭುಗಿಲೆದ್ದಿದೆ.

ಅನ್ಯ ಕ್ಷೇತ್ರದವರನ್ನು ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲು ಮುಖ್ಯಮಂತ್ರಿ ಮುಂದಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ವತಃ ರಾಜಣ್ಣ ಅವರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಚರ್ಚೆ ನಡೆಸಿದ್ದಾರೆ. ಆದರೆ, ಸಿದ್ದರಾಮಯ್ಯ ತಮ್ಮ ನಿರ್ಧಾರವನ್ನು ಬದಲಿಸಲು ಸಿದ್ಧರಿಲ್ಲ. ಹೀಗಾಗಿ ಸಚಿವ ರಾಜಣ್ಣ ಕೂಡ ಮುನಿಸಿಕೊಂಡಿದ್ದಾರೆ.

ಈ ಮಧ್ಯೆ ಕೃಷ್ಣ ಬೈರೇಗೌಡರಿಗೂ ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವ ಮನಸ್ಸಿಲ್ಲ. ಹುಡಾ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಧಾರ ಹೊರಬೀಳುವವರೆಗೆ ಅಧಿಕೃತವಾಗಿ ಉಸ್ತುವಾರಿ ಸಚಿವರನ್ನಾಗಿ ಘೋಷಿಸದಂತೆ ಮುಖ್ಯಮಂತ್ರಿ ಬಳಿಯೂ ಹೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss