ಕೆ.ಎನ್. ರಾಜಣ್ಣ ರಾಜೀನಾಮೆ ಪ್ರಹಸನಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಿದ್ದರಾಮಯ್ಯಗೆ, ರಾಜಣ್ಣ ರಾಜೀನಾಮೆ ಪತ್ರ ಸಲ್ಲಿಸಿದ್ರು. ಪಿಎಸ್ ಡಾ. ವೆಂಕಟೇಶಯ್ಯ ಕೈಗೆ ರಾಜೀನಾಮೆ ಪತ್ರ ನೀಡಿದ್ರು. ಹೀಗಾಗಿ ಪಿಎಸ್ ಅನ್ನು ಕಚೇರಿಗೆ ಕರೆಸಿಕೊಂಡು, ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದ್ದಾರೆ.
ಬಲಗೈ ಬಂಟನಂತಿದ್ದ ರಾಜಣ್ಣನ ರಾಜೀನಾಮೆಯಿಂದ, ಸಿದ್ದರಾಮಯ್ಯ ಅಘಾತಕ್ಕೆ ಒಳಗಾಗಿದ್ದಾರೆ. ಎಂಎಲ್ಸಿ ರಾಜೇಂದ್ರ ಎದುರು, ಏನಪ್ಪ ಹೀಗೆಲ್ಲಾ ಆಗಿದೆ ಅಂತಾ, ಸಿದ್ದು ಹೇಳಿಕೊಂಡಿದ್ದಾರೆ.
ವಿಧಾನಸೌಧದ ಸಿಎಂ ಕಚೇರಿಗೆ ಹೋಗುವಾಗಲೂ, ಸಿದ್ದರಾಮಯ್ಯ ಬಹಳ ಗಂಭೀರವಾಗಿ ಇದ್ರು. ಯಾರ ಜೊತೆಯೂ ಮಾತನಾಡಲೇ ಇಲ್ಲ. ಮುಖದಲ್ಲಿ ಒಂಚೂರು ನಗು ಇರ್ಲಿಲ್ಲ. ಒಂದೆಡೆ ಹೈಕಮಾಂಡ್ ಸೂಚನೆಯನ್ನೂ ಉಲ್ಲಂಘಿಸುವಂತಿಲ್ಲ. ಮತ್ತೊಂದೆಡೆ ಪರಮಾಪ್ತನನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಸದ್ಯ, ಸಂದಿಗ್ಧ ಸ್ಥಿತಿಯಲ್ಲಿ ಸಿದ್ದರಾಮಯ್ಯ ಸಿಲುಕಿದ್ದಾರೆ.
ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳಿಸುಕೊಡುವ ಪ್ರಕ್ರಿಯೆ ನಡೀತಿದೆ. ಜೊತೆಯಲ್ಲೇ ರಾಜಣ್ಣ ವಿಚಾರದಲ್ಲಿ ಹೈಕಮಾಂಡ್ ಮನವೊಲಿಸಲು, ಸಿದ್ದರಾಮಯ್ಯ ಶತಪ್ರಯತ್ನ ಮಾಡ್ತಿದ್ದಾರೆ.
ಆಗಸ್ಟ್ 11ರ ಬೆಳ್ಳಂ ಬೆಳಗ್ಗೆಯೇ ಸಿದ್ದರಾಮಯ್ಯಗೆ, ಉಸ್ತುವಾರಿ ಸುರ್ಜೇವಾಲ ಫೋನ್ ಮಾಡಿದ್ದಾರೆ. ಸಚಿವ ಸ್ಥಾನದಿಂದಷ್ಟೇ ಅಲ್ಲ. ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟನೆ ಮಾಡುವಂತೆ ಸೂಚಿಸಿದ್ದಾರೆ. ಆ ವೇಳೆಯೂ ರಾಜಣ್ಣ ಪರವಾಗಿ ಮನವೊಲಿಕೆ ಯತ್ನ ಮಾಡಿದ್ರಂತೆ. ಆದರೆ, ಕೊನೆಗೂ ಪರಮಾಪ್ತನನ್ನ ಸಂಪುಟದಲ್ಲಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ.

