ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಅವರು ರಾಜೀನಾಮೆ ಕೊಟ್ಟಿಲ್ಲ. ಬದಲಾಗಿ ಸಿಎಂ ಸಿದ್ದರಾಮಯ್ಯ ಸಂಪುಟದಿಂದ ಅವರನ್ನ ವಜಾಗೊಳಿಸಲಾಗಿದೆ. ST ಸಮುದಾಯದ ನಾಯಕರನ್ನ ಸಚಿವ ಸ್ಥಾನದಿಂದ ಕೆಳಗಿಳಿಸಿರೋದು ಕಾಂಗ್ರೆಸ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವ ಕೆ.ಎನ್ ರಾಜಣ್ಣ ಅವರಿಗೆ ಯಾಕಿಂಥಾ ಸ್ಥಿತಿ ಬಂತು ಅನ್ನೋದು ಈಗ ಬಹಳ ಮುಖ್ಯವಾಗಿದೆ.
ಇಂದು ರಾಜೀನಾಮೆ ನೀಡಿರುವ ಕೆ. ಎನ್ ರಾಜಣ್ಣ ಅವರು ತಮ್ಮದೇ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ವರಿಷ್ಠರು ಮುಜುಗುರಕ್ಕೀಡಾಗುವಂತೆ ಮಾಡುತ್ತಿದ್ದರು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆಎನ್ ರಾಜಣ್ಣ ಅವರಿಗೆ ಸೂಚಿಸಿದೆ ಎನ್ನಲಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಎನ್ ರಾಜಣ್ಣ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ಶಾಸಕ ಕೆ.ಎನ್ ರಾಜಣ್ಣ ಅವರ ರಾಜಕೀಯ ಜೀವನ ಹೇಗಿತ್ತು ಅನ್ನೋದನ್ನ ನೋಡೋದಾದ್ರೆ..
ಕೆ.ಎನ್ ರಾಜಣ್ಣ 1972ರಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿರುವ ಕೆ.ಎನ್ ರಾಜಣ್ಣ ಅವರು ಹಲವು ಸಹಕಾರಿ ಬ್ಯಾಂಕುಗಳ ಅಧ್ಯಕ್ಷರಾಗಿದ್ದರು. ಕೆ.ಎನ್ ರಾಜಣ್ಣ ಅವರು 1998-2004 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಬೆಳಗಾವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮಧುಗಿರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕೆಎನ್ ರಾಜಣ್ಣ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಗೆದ್ದು ಬೀಗಿದರು.
ಮಧುಗಿರಿಯ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ಸುದೀರ್ಘ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದಾರೆ. ಕೆಎನ್ ರಾಜಣ್ಣ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು. ಈ ಹಿಂದೆ ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ನಿರ್ದೇಶಕರಾಗಿ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಕೆಎನ್ ರಾಜಣ್ಣ ಸೇವೆ ಸಲ್ಲಿಸಿದ್ದಾರೆ.
2013ರ ಚುನಾವಣೆಯಲ್ಲೂ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಮಧುಗಿರಿಯಿಂದ ಸ್ಪರ್ಧಿಸಿ 75,086 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 2013 ರಲ್ಲಿ ಮತ್ತೆ ವಿಧಾನಸಭೆ ಪ್ರವೇಶಿಸಿದರು. 2023ರಲ್ಲಿ ಮತ್ತೆ ಮಧುಗಿರಿ ಕ್ಷೇತ್ರದಿಂದ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದರು. ಆದರೆ, ಪಕ್ಷದ ವಿರುದ್ಧವೇ ಕೆಎನ್ ರಾಜಣ್ಣ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿ, ರಾಜೀನಾಮೆ ನೀಡಿದ್ದಾರೆ.
ರಾಜಣ್ಣಗೆ ಮುಳುವಾದ ಆ ಹೇಳಿಕೆಗಳು, ಚಟುವಟಿಕೆಗಳು ಯಾವ್ಯಾವು?
* ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಕೂಡ ಸಚಿವ ರಾಜಣ್ಣ ತಲೆದಂಡವಾಗಿದೆ. ಇದಕ್ಕೆ, ಅವರು ನಿರಂತರವಾಗಿ ನೀಡುತ್ತಿದ್ದ ಪಕ್ಷವಿರೋಧಿ ಹೇಳಿಕೆಗಳು, ಚಟುವಟಿಕೆಗಳೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಿಂದ ಹಿಡಿದು, ಮುಖ್ಯಮಂತ್ರಿ ಬದಲಾವಣೆ ವಿಚಾರದವರೆಗೆ ಹಲವು ಬಾರಿ ರಾಜಣ್ಣ ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನು ನೀಡಿದ್ದರು. ಇದೀಗ ಮತ ಕಳ್ಳತನ ವಿಚಾರದಲ್ಲಿ ಹೈಕಮಾಂಡ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಿರುವಾಗ ನೀಡಿರುವ ಹೇಳಿಕೆ ಅವರಿಗೆ ಮತ್ತಷ್ಟು ಹಿನ್ನಡೆ ಆಗಿರಬಹುದು.
* ಹನಿ ಟ್ರ್ಯಾಪ್ ವಿಚಾರವಾಗಿ ರಾಜಣ್ಣ ನೀಡಿದ್ದ ಹೇಳಿಕೆ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಸದನದಲ್ಲಿ ಕೂಡ ಈ ವಿಚಾರ ಚರ್ಚೆಯಾಗಿತ್ತು. ರಾಜಣ್ಣ ಅವರು ತಾವೂ ಸೇರಿ 48 ರಾಜಕಾರಣಿಗಳು ಹನಿ-ಟ್ರ್ಯಾಪ್‌ಗೆ ಒಳಪಟ್ಟಿದ್ದೇವೆ ಎಂದು ಮಹತ್ವದ ಹೇಳಿಕೆ ನೀಡಿದ್ದರು. ಅವರು ಈ ವಿಷಯದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ನಂತರ ಸಿಐಡಿ ತನಿಖೆ ನಡೆಸಿ ಸಾಕ್ಷ್ಯಾಧಾರಗಳ ಕೊರತೆ ಇರುವುದಾಗಿ ಹೇಳಿತ್ತು.
* ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ನೀಡಿದ ಹೇಳಿಕೆ. ಈಗ ಕಾಂಗ್ರೆಸ್‌ನಲ್ಲಿ ಅತಿಯಾದ ಅಧಿಕಾರ ಕೇಂದ್ರಗಳಿವೆ, ಇದರಿಂದ ಸಮಸ್ಯೆಗಳಾಗುತ್ತಿವೆ ಎಂದಿದ್ದ ರಾಜಣ್ಣ, ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದಿದ್ದರು. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಬದಲಾವಣೆ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿತ್ತು.
* ಎಸ್ಸಿ ಎಸ್ಟಿ ಶಾಸಕರ ಸಭೆ ನಡೆಸಲು ರಾಜಣ್ಣ ಮುಂದಾಗಿದ್ದರು. ಇದಕ್ಕೆ ಹೈಕಮಾಂಡ್ ಅನುಮತಿ ನೀಡಿರಲಿಲ್ಲ. ಈ ವಿಚಾರವಾಗಿ ರಾಜಣ್ಣ ಬಹಿರಂಗವಾಗಿ ಅಸಮಾಧಾನದ ಹೇಳಿಕೆಗಳನ್ನು ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳು ಕೆ.ಎನ್ ರಾಜಣ್ಣ ಅವರ ರಾಜೀನಾಮೆಗೆ ಕಾರಣವಾಯ್ತು ಎನ್ನುವ ಚರ್ಚೆಗಳು ಶುರುವಾಗಿವೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ