ಸಿದ್ದರಾಮಯ್ಯ ಸಂಪುಟದಿಂದ ವಜಾ ಆಗಿರುವ ಕೆ.ಎನ್ ರಾಜಣ್ಣ ಅವರು ಈಗ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ ಗೃಹ ಸಚಿವ ಪರಮೇಶ್ವರ್ ಜೊತೆ ರಾಜಣ್ಣ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಕೊಟ್ಟ ಬಳಿಕ ರಾಜಣ್ಣ ಅವರು ಇದೊಂದು ಷಡ್ಯಂತ್ರ, ಪಿತೂರಿ ಎಂಬ ಹೇಳಿಕೆ ನೀಡಿದ್ದರು. ಇದೀಗ ಆಗಿರೋ ದೊಡ್ಡ ಅನಾಹುತವನ್ನ ಸರಿಪಡಿಸೋ ದಾರಿ ಹುಡುಕುತ್ತಿದ್ದಾರೆ.
ಪರಮೇಶ್ವರ್ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ರಾಜಣ್ಣ ಇವತ್ತು ಮಾತುಕತೆ ನಡೆಸಿದ್ದಾರೆ. ನೀವು ಆ ರೀತಿ ಮಾತನಾಡಬಾರದಿತ್ತು ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ರೆ ಅದಕ್ಕೆ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ನನ್ನ ಮಾತು ಇಷ್ಟೊಂದು ತೀವ್ರ ಸ್ವರೂಪಕ್ಕೆ ಹೋಗುತ್ತೆ ಅಂತ ಗೊತ್ತಿರಲಿಲ್ಲ. ನನ್ನ ಮಾತಿನಿಂದ ಹೀಗಾಗುತ್ತೆ ಎಂದೂ ತಿಳಿಯಲಿಲ್ಲ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ.
ಇನ್ನು, ರಾಜಣ್ಣರನ್ನು ಮಂತ್ರಿಸ್ಥಾನದಿಂದ ಕಿತ್ತುಹಾಕಿದ್ದು ಯಾಕೆ ಅನ್ನೋದು ರಹಸ್ಯವಾಗಿತ್ತು. ಸಂಪುಟದಲ್ಲಿರುವ ಹಿರಿಯ ಸಚಿವರಾದ ಯಾರಿಗೂ ಗೊತ್ತಿರಲಿಲ್ಲ. ಜಿ ಪರಮೇಶ್ವರ್ ಮತ್ತು ರಾಜಣ್ಣ ಒಂದೇ ಜಿಲ್ಲೆಯವರಾದರೂ ಗೃಹ ಸಚಿವರು ಈ ಬಗ್ಗೆ ಮಾತನಾಡಿಲ್ಲ. ಇದು ಹೈಕಮಾಂಡ್ ತೀರ್ಮಾನ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ವರಿಷ್ಠರ ತೀರ್ಮನವನ್ನು ಗೌರವಿಸುತ್ತಾರೆ ಮತ್ತು ಅದಕ್ಕೆ ಬದ್ಧರಾಗಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು. ವಜಾ ಮಾಡಿರುವ ಕಾರಣ ಕೆಪಿಸಿಸಿ ಅಧ್ಯಕ್ಷರಿಗೆ ಗೊತ್ತಿರಬಹುದು ಇಲ್ಲವೇ ಮುಖ್ಯಮಂತ್ರಿಯವರಿಗೆ, ರಾಜಣ್ಣನರಿಗೆ ಸಹಜವಾಗೇ ಅಸಮಾಧಾನ ಇರುತ್ತದೆ. ಆದರೆ ವಜಾ ಮಾಡಿರುವ ಹಿಂದಿನ ಕಾರಣ ಬೇರೆ ಯಾರಿಗೂ ಗೊತ್ತಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಹೈಕಮಾಂಡ್ನವರನ್ನು ವಿಚಾರಿಸಿ ಅಂತ ರಾಜಣ್ಣ ಹೇಳಿದ್ದು ನಿಜ, ಅದರೆ ನಾನು ಯಾರೊಂದಿಗೂ ಮಾತಾಡಲಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. ತಮ್ಮ ಸ್ಫೋಟಕ ಹೇಳಿಕೆಗಳಿಂದಲೇ ಪಕ್ಷದೊಳಗೆ ರಾಜಣ್ಣ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ರಾಜಣ್ಣರನ್ನು ಸಿಎಂ ಸಿದ್ದರಾಮಯ್ಯ ಅವರು ಸಂಪುಟದಿಂದ ವಜಾ ಮಾಡಿದ್ದಾರೆ.
ವಜಾಗೊಳಿಸುವ ಮುನ್ನ ಹೈಕಮಾಂಡ್ ಮನವೊಲಿಕೆಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದರು. ಮೊದಲು ವೇಣುಗೋಪಾಲ್ ಮೂಲಕ ಸಿಎಂಗೆ ಕಾಲ್ ಬಂದಿತ್ತು. ರಾಜಣ್ಣ ರಾಜೀನಾಮೆ ಪಡೆಯಿರಿ ಎಂದು ಸಂದೇಶ ರವಾನೆಯಾಯಿತು. ಆದರೆ, ಆಗ ಒಪ್ಪದೇ ಸಿಎಂ ಸಮಯ ಕೇಳಿದ್ದರು. ಅಧಿವೇಶನ ಮುಗಿದ ಬಳಿಕ ನೋಡೋಣ ಎಂದಿದ್ದರು. ಹೈಕಮಾಂಡ್ ಬಳಿ ಸಿಎಂ 10 ದಿನ ಟೈಂ ಕೇಳಿದ್ದರು. ಆಗ ರಾಹುಲ್ ಬಳಿ ಮಾತನಾಡುವಂತೆ ವೇಣುಗೋಪಾಲ್ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ರಾಜಣ್ಣರನ್ನು ಸಂಪುಟದಿಂದ ವಜಾ ಮಾಡುವಂತೆ ರಾಹುಲ್ ಗಾಂಧಿ ಅವರು ಸಿಎಂಗೆ ಸೂಚನೆ ನೀಡಿದ್ದಾರೆ. ಅದಾದ ಬಳಿಕ ಆಪ್ತ ರಾಜಣ್ಣ ವಜಾಗೆ ರಾಜ್ಯಪಾಲರಿಗೆ ಸಿಎಂ ಶಿಫಾರಸು ಮಾಡಿದರು.

