Wednesday, August 20, 2025

Latest Posts

ಕೆ.ಎನ್. ರಾಜಣ್ಣ ವಜಾಕ್ಕೆ ಇವರೇ ಕಾರಣ!!

- Advertisement -

ಆಗಸ್ಟ್ 11ರಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಿಂದ ಕೆ.ಎನ್ ರಾಜಣ್ಣ ಅವರ ತಲೆದಂಡವಾಗಿದೆ. ಸಿಎಂ ಆಪ್ತರೂ ಎನ್ನುವುದನ್ನು ನೋಡದೇ ಹೈಕಮಾಂಡ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದೆ. ಇದಕ್ಕೆ ರಾಹುಲ್ ಗಾಂಧಿಗೆ ದೂರು ಕೊಟ್ಟಿರುವುದೇ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ದೂರು ಕೊಟ್ಟಿದ್ದು ಯಾರು ಅನ್ನೋ ಸತ್ಯ ಇದೀಗ ಬಯಲಾಗಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ, ಮಧುಗಿರಿ ಹಾಲಿ ಶಾಸಕ ಕೆ.ಎನ್ ರಾಜಣ್ಣ ಅವರ ದಿಢೀರ್ ತಲೆದಂಡವಾಗಿದೆ. ರಾಜಣ್ಣ ಅವರ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಇವರ ತಲೆದಂಡಕ್ಕೆ ನಾನಾ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ದೆಹಲಿಯಲ್ಲಿ ನಡೆದ ಒಂದು ವಿದ್ಯಮಾನವು ಪ್ರಮುಖ ಕಾರಣವಾಯಿತು ಎನ್ನುವುದು ಇದೀಗ ಗೊತ್ತಾಗಿದೆ.

ಸದ್ಯ ದೇಶದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಮತಗಳ್ಳತನದ ವಿಚಾರದಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ಅಭಿಯಾನವನ್ನು ನಡೆಸುತ್ತಿದೆ. ಆಗಸ್ಟ್ 11ರಂದು ದೆಹಲಿಯಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಭಾರೀ ಪ್ರತಿಭಟನೆಯನ್ನು ನಡೆಸಿದ್ದವು. ವಿರೋಧ ಪಕ್ಷಗಳ ನೂರಾರು ಸಂಸದರು ಇದರಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ, ತಮ್ಮದೇ ಒಕ್ಕೂಟಗಳ ಪಾರ್ಟಿಯ ನಾಯಕರಿಂದ ಮುಜುಗರ ಎದುರಿಸುವ ಪ್ರಸಂಗ ಎದುರಾಯಿತು. ಅಲ್ಲಿಯವರೆಗೆ, ರಾಹುಲ್ ಗಾಂಧಿಗೆ ಆ ವಿಚಾರದ ಬಗ್ಗೆ ಗೊತ್ತೇ ಇರಲಿಲ್ಲ. ಅದು, ಕೆಎನ್ ರಾಜಣ್ಣ, ಮತಗಳ್ಳತನದ ಬಗ್ಗೆ ಆಡಿದ್ದ ಮಾತಾಗಿತ್ತು.

ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಯ ಕೆಲವು ಸಂಸದರು, ಕರ್ನಾಟಕದಲ್ಲಿ ನಿಮ್ಮ ಪಾರ್ಟಿಯ ಸಚಿವರೇ ನಮ್ಮ ಹೋರಾಟದ ಬಗ್ಗೆ ಅಪಸ್ವರ ಎತ್ತಿದ್ದಾರಲ್ಲವೇ, ಇದು ಸರಿಯಲ್ಲ. ಇದರಿಂದ ದೇಶದ ಜನತೆಗೆ ಏನು ಸಂದೇಶ ನೀಡಿದಂತಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಸಮ್ಮುಖದಲ್ಲಿ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ.

ಕೂಡಲೇ ರಾಹುಲ್ ಗಾಂಧಿ ಅವರು ಅಲ್ಲೇ ಇದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅವರನ್ನು ರಾಜೀನಾಮೆ ನೀಡಲು ಸೂಚಿಸಿ, ಸಂಪುಟದಿಂದ ಕೈಬಿಡಲು ರಾಹುಲ್ ಗಾಂಧಿ ಸೂಚನೆಯನ್ನು ನೀಡಿದ್ದಾರೆ. ಆವೇಳೆಯೇ, ತಮ್ಮ ತಲೆದಂಡದ ಬಗ್ಗೆ ರಾಜಣ್ಣ ಅವರಿಗೆ ಮಾಹಿತಿ ಸಿಕ್ಕಿತ್ತು.

ರಾಹುಲ್ ಗಾಂಧಿ ಸೂಚನೆಯಂತೆ ಕೂಡಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವೇಣುಗೋಪಾಲ್ ಕರೆ ಮಾಡಿದ್ದಾರೆ. ರಾಜಣ್ಣ ಅವರಿಂದ ರಾಜೀನಾಮೆಯನ್ನು ಪಡೆಯಿರಿ, ಸಂಪುಟದಿಂದ ಅವರನ್ನು ಕೈಬಿಡುವಂತೆ ಸೂಚಿಸಿದ್ದಾರೆ. ಆ ವೇಳೆ, ಸಿದ್ದರಾಮಯ್ಯ ಹೈಕಮಾಂಡ್ ಮನವೊಲಿಸುವ ಕೆಲಸವನ್ನು ಮಾಡಲು ಪ್ರಯತ್ನಿಸಿದ್ದಾರೆ.

ರಾಜಣ್ಣನವರ ಮಾತುಕತೆ ನಡೆಸುವ ಅವಶ್ಯಕತೆಯೂ ಇಲ್ಲ ಎಂದು ಹೈಕಮಾಂಡ್ ಮತ್ತೊಂದು ಸೂಚನೆಯನ್ನು ನೀಡಿದೆ. ಹೀಗಾಗಿ, ಬೇರೆ ದಾರಿ ಕಾಣದೇ, ಸಿಎಂ ಸಿದ್ದರಾಮಯ್ಯ, ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇಂಡಿಯಾ ಒಕ್ಕೂಟದ TMC ಹಾಗೂ SP ಸಂಸದರೇ, ರಾಜಣ್ಣ ಅವರ ತಲೆದಂಡಕ್ಕೆ ಪ್ರಮುಖ ಕಾರಣವಾಗಿದೆ.

- Advertisement -

Latest Posts

Don't Miss