ಕೆ.ಎನ್ ರಾಜಣ್ಣ ವಜಾಗೊಂಡ ಬಳಿಕ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ದಿಢೀರ್ ನಿರ್ಧಾರ ಹಲವು ಸಚಿವರಿಗೆ ಶಾಕ್ ಕೊಟ್ಟಿದೆ. ರಾಜಣ್ಣ ಅವರ ರಾಜೀನಾಮೆ ಪ್ರಹಸನದ ಮಧ್ಯೆ ಬಿಜೆಪಿ ನಾಯಕರು ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ಸದನದಲ್ಲಿ ಡಿಕೆಶಿ ಕೆಮ್ಮಿದ್ದಕ್ಕೆ ವಿಶೇಷವಾದ ಅರ್ಥ ಕಲ್ಪಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಇವತ್ತು ಮಹತ್ವದ ಚರ್ಚೆ ನಡೆಯಿತು. ಜಲಸಂಪನ್ಮೂಲ ಸಚಿವರು ಆದ ಡಿ.ಕೆ ಶಿವಕುಮಾರ್ ಅವರು ಪ್ರಶ್ನೋತ್ತರ ಕಲಾಪದ ವೇಳೆ ಉತ್ತರಿಸಿದರು.
ಅಧ್ಯಕ್ಷರೇ.. ಆಲಮಟ್ಟಿ ಎಡದಂಡೆ ಕಾಲುವೆ ಯೋಜನೆಯ ಹಳೇ ಕೆಲಸ ಇದು ಎನ್ನುವಾಗ ಡಿ.ಕೆ ಶಿವಕುಮಾರ್ ಕೆಮ್ಮಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಹಾರೈಕೆ ಚೆನ್ನಾಗಿ ನೋಡಿಕೊಳ್ಳಿ. ಕೆಮ್ಮುತ್ತಾ ಇದ್ದೀರಿ.. ಅದರಲ್ಲಿ ಬೇರೆ ಅರ್ಥ ಇಲ್ಲ. ಬೇರೆ ಅರ್ಥದಲ್ಲಿ ಹೇಳಿಲ್ಲ ಎಂದು ಕಿಚಾಯಿಸಿದರು.
ಬಿಜೆಪಿ ಶಾಸಕರ ಈ ಮಾತಿಗೆ ಸ್ಪೀಕರ್ ಯು.ಟಿ ಖಾದರ್ ಕೂಡ ನಗೆ ಚಟಾಕಿ ಹಾರಿಸಿದರು. ಆರಗ ಜ್ಞಾನೇಂದ್ರ ಅವ್ರೇ ಸದನದಲ್ಲಿ ಎಷ್ಟೊಂದು ಜನ ಕೆಮ್ಮುತ್ತಾ ಇದ್ದಾರೆ. ಯಾರ ಬಗ್ಗೆಯೂ ನಿಮಗೆ ಕಾಳಜಿ ಇಲ್ಲ. ಡಿ.ಕೆ ಶಿವಕುಮಾರ್ ಅವರ ಮೇಲೆ ಯಾಕೆ ನಿಮಗೆ ವಿಶೇಷವಾದ ಕಾಳಜಿ. ಯಾಕೆ ಡಿಕೆಶಿ ಅವರ ಮೇಲೆ ನಿಮಗೆ ಅಷ್ಟೋಂದು ಪ್ರೀತಿ? ಎಂದು ಸ್ಪೀಕರ್ ಪ್ರಶ್ನಿಸಿದರು.
ಕೊನೆಗೆ ಡಿ.ಕೆ ಶಿವಕುಮಾರ್ ಅವರು ಥ್ಯಾಂಕ್ಯು.. ಗೌರವಾನ್ವಿತ ಸದಸ್ಯರೇ.. ಥ್ಯಾಂಕ್ಯು ಸುನಿಲ್, ಆರಗ ಜ್ಞಾನೇಂದ್ರ. ವಿಶೇಷವಾಗಿ ಅಶ್ವತ್ಥ್ ನಾರಾಯಣ್ ಅವರಿಗೆ ಧನ್ಯವಾದಗಳು ಎಂದರು. ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರು ನೀವು ಕೆಮ್ಮಿದ್ರೆ ಯಾರ್ ಯಾರಿಗೆ ಅಪಾಯ ಕಾದಿದ್ಯೋ ಗೊತ್ತಿಲ್ಲ ಅಂದ್ರು. ಡಿ.ಕೆ ಶಿವಕುಮಾರ್ ಅವರ ಕೆಮ್ಮಿಗೆ ಸದನದಲ್ಲಿ ಇಷ್ಟೆಲ್ಲಾ ಚರ್ಚೆ ನಡೆದಿದೆ. ರಾಜಣ್ಣ ಅವರನ್ನ ವಜಾಗೊಳಿಸಿದ ಮೇಲೆ ವಿರೋಧ ಪಕ್ಷ ನಾಯಕರ ಕಣ್ಣು ಸೀದಾ ಡಿ.ಕೆ ಶಿವಕುಮಾರ್ ಅವರ ಮೇಲೆ ಬಿದ್ದಿರೋದಂತೂ ಸುಳ್ಳಲ್ಲ..

