ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ, ಬೆಳ್ಳಂಬೆಳಗ್ಗೆ ಇಡಿ ಶಾಕ್ ಕೊಟ್ಟಿದೆ. ಉತ್ತರಕನ್ನಡ ಜಿಲ್ಲೆ ಕಾರವಾರದ ಸದಾಶಿವಗಡದಲ್ಲಿರುವ ನಿವಾಸದ ಮೇಲೆ, 24ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ. 6 ಕಾರುಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದ್ರು.
ಕಾರವಾರದಲ್ಲಿ ನಡೆಸಲಾಗ್ತಿದ್ದ ಅದಿರು ಸಾಗಾಟ ಪ್ರಕರಣ, ಸತೀಶ್ ಸೈಲ್‌ರನ್ನು ಜೈಲು ಸೇರುವಂತೆ ಮಾಡಿತ್ತು. ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅದಿರು ಸಾಗಾಟ ಮಾಡುತ್ತಿದ್ರು. ಈ ವಿಚಾರವಾಗಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತಂಡ ದೂರು ದಾಖಲಿಸಿದ್ರು. 2024ರ ಅಕ್ಟೋಬರ್‌ನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಬೇಲೆಕೇರಿ ಬಂದರಿನಿಂದ, ಅಕ್ರಮವಾಗಿ ವಿದೇಶಕ್ಕೆ ಅದಿರು ಸಾಗಾಟ ಮಾಡಿದ್ದ ಕೇಸಲ್ಲಿ, ದೋಷಿ ಅಂತಾ ತೀರ್ಪು ನೀಡಿತ್ತು. 6 ಪ್ರಕರಣಗಳಲ್ಲಿ 7 ವರ್ಷ ಶಿಕ್ಷೆ, 44 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು. ಜೊತೆಗೆ ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ ಎದುರಾಗಿತ್ತು. ಬಳಿಕ ಹೈಕೋರ್ಟ್ ಜಾಮೀನು ಪಡೆದು, ಸತೀಶ್ ಸೈಲ್ ಹೊರಗೆ ಬಂದಿದ್ರು.
ಕಾರವಾರದಲ್ಲಿರುವ ನಿವಾಸದ ಮೇಲೆ ಇಡಿ ದಾಳಿಯಾಗಿದ್ರೆ, ವಿಧಾನಸಭಾ ಅಧಿವೇಶದ ಹಿನ್ನೆಲೆ ಸತೀಶ್ ಸೈಲ್ ಬೆಂಗಳೂರಿನಲ್ಲಿದ್ದಾರೆ. ಕುಟುಂಬಸ್ಥರು ಕೂಡ ಇರಲಿಲ್ಲ. ಹೀಗಾಗಿ ಬೆಳ್ಳಗ್ಗೆಯೇ ಎಂಟ್ರಿ ಕೊಟ್ಟಿದ್ದ ಇಡಿ, ಕೆಲ ಹೊತ್ತು ಮನೆ ಹೊರಗೆ ನಿಂತು ಕಾಯಬೇಕಾಯ್ತು. ಬಳಿಕ ಮನೆಯೊಳಗೆ ಎಂಟ್ರಿ ಕೊಟ್ಟಿದೆ. ಸದ್ಯ, ಮನೆ ಕೆಲಸದವರನ್ನ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಮನೆಗೆ ಬರುವಂತೆ ಸತೀಶ್ ಸೈಲ್‌ಗೆ ಬುಲಾವ್ ಕೊಟ್ಟಿದೆ. ಆದಾಯಕ್ಕಿಂತ ಹೆಚ್ಚು ಹಣ ಮಾಡಿರುವ ಆರೋಪದ ಮೇರೆಗೆ, ಈ ಇಡಿ ದಾಳಿ ನಡೆಸಿದೆ.