ದೆಹಲಿ, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ರಸ್ತೆಗಳಲ್ಲಿ ಓಡಾಡುವವರ ಮೇಲೆ ನಡೆದ ದಾಳಿಗೆ ಅನೇಕ ಮಂದಿ ಬಲಿಯಾಗುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ನೋಡಿದ ಸುಪ್ರೀಂ ಕೋರ್ಟ್ ದೆಹಲಿ ಸೇರಿದಂತೆ ಎಲ್ಲಾ ನಗರಗಳಿಗೆ ಕಠಿಣ ಸೂಚನೆಗಳನ್ನು ನೀಡಿದೆ.
ದೆಹಲಿಯಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ. ಆ ಆದೇಶದ ಒಂದು ದಿನದ ಬಳಿಕ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಮಹತ್ವದ ನಿಲುವು ತಾಳಿದೆ. ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಬೀದಿ ನಾಯಿಗಳನ್ನು ಇದೇ ರೀತಿಯಲ್ಲಿ ನಿರ್ವಹಿಸುವಂತೆ ನಿರ್ದೇಶಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಿದೆ. ಬೀದಿ ನಾಯಿಗಳಿಗೆ ಸಂಬಂಧಿಸಿದ ಅರ್ಜಿಗಳ ಗುಂಪನ್ನು ವಿಚಾರಣೆ ನಡೆಸುವಾಗ ಹೈಕೋರ್ಟ್ನ ಪೀಠ ಈ ಹೇಳಿಕೆ ನೀಡಿದೆ.
ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು 3.67 ಲಕ್ಷ ನಾಯಿ ಕಡಿತದ ಪ್ರಕರಣಗಳು ಮತ್ತು ತಮಿಳುನಾಡಿನಲ್ಲಿ 20 ರೇಬೀಸ್ ಸಾವುಗಳ ಹಿನ್ನೆಲೆಯಲ್ಲಿ ತೀವ್ರ ಚಿಂತನೆ ನಡೆಸಿದೆ. ಸರ್ಕಾರವು ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ಮಾರ್ಗಸೂಚಿಗಳನ್ನು ವಿವರವಾಗಿ ಅಧ್ಯಯನ ಮಾಡಿ ನಂತರ ಜಂಟಿ ಆದೇಶವನ್ನು ಹೊರಡಿಸುವುದಾಗಿ ಪೀಠ ಹೇಳಿದೆ.
ಹಾಗಿದ್ರೆ ಸುಪ್ರೀಂಕೋರ್ಟ್ನ ತೀರ್ಮಾನಗಳು ಏನು? ಅನ್ನೋದನ್ನ ನೋಡೋದಾದ್ರೆ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡುವುದು ಕಡ್ಡಾಯ. ರೇಬಿಸ್ ತಡೆಗಾಗಿ ಲಸಿಕೆ ಅಭಿಯಾನಗಳು ನಡೆಸಬೇಕು. ಆಶ್ರಯ ಗೃಹ ನಿರ್ಮಾಣದ ಯೋಜನೆ ಬಗ್ಗೆ 8 ವಾರಗಳಲ್ಲಿ ವರದಿ ಸಲ್ಲಿಸಬೇಕು. ಹಿಡಿದ ಬೀದಿ ನಾಯಿಗಳನ್ನು ಮತ್ತೆ ಬೀದಿಗೆ ಬಿಡಬಾರದು. 4 ಗಂಟೆಗಳ ಒಳಗೆ ದೂರುಗಳ ಮೇಲೆ ಕ್ರಮ ಕೈಗೊಳ್ಳಬೇಕು. helpline ಸ್ಥಾಪಿಸುವಂತೆ ನಿರ್ದೇಶನ ನೀಡಿದೆ.
ಇತ್ತೀಚೆನ ದಿನಗಳಲ್ಲಿ ಬೆಂಗಳೂರಿನ ಅನೇಕ ಭಾಗಗಳಲ್ಲಿ ನಾಯಿಗಳ ದಾಳಿ, ಶಾಲಾ ಮಕ್ಕಳ ಮೇಲೆ ಹಲ್ಲೆ, ರಾತ್ರಿ ಸಮಯದಲ್ಲಿ ಓಡಾಡುವ ಜನರ ಭಯ ಈ ಎಲ್ಲವು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕೂಡ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಇಲ್ಲಿನ ಸರ್ಕಾರವು ಕೂಡ ಬೀದಿ ನಾಯಿಗಳ ಹಾವಳಿ ತಡೆಯಲು ಇದೇ ಮಾದರಿಯ ಕಾರ್ಯ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.