ನಟ ದರ್ಶನ್ ಅವರಿಗೆ ಮತ್ತೊಂದು ಕಾನೂನು ಹೊಡೆತ ಬಿದ್ದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಈಗ ತಕ್ಷಣವೇ ಶರಣಾಗಬೇಕು ಅಥವಾ ಬಂಧನ ಎದುರಿಸಬೇಕು ಎಂಬ ಸ್ಥಿತಿಯಲ್ಲಿದ್ದಾರೆ.
ದರ್ಶನ್ ಪರ ವಕೀಲರು ಈವರೆಗೆ ಎಫ್‌ಐಆರ್ ರದ್ದುಪಡಿಸುವ ಸಲುವಾಗಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಯೋಜನೆ ಹೊಂದಿದ್ದಾರೆ. ಆದರೆ, ಜಾಮೀನು ರದ್ದುಗೊಂಡಿರುವ ಕಾರಣ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಕೂಡ ಸೀಮಿತವಾಗಿದೆ.
ಈಗ ದರ್ಶನ್ ಅಂಡ್ ಗ್ಯಾಂಗ್ ಮುಂದೇನು ಮಾಡಬಹುದು? ಅನ್ನೋದು ನೋಡೋದಾದ್ರೆ. ಕೊಲೆ ಆರೋಪಿ ದರ್ಶನ್ ಗೆ ಮುಂದಿನ 6 ತಿಂಗಳವರೆಗೂ ಜೈಲು ವಾಸ ಗ್ಯಾರಂಟಿ ಎನ್ನಲಾಗಿದೆ. ದರ್ಶನ್ ಹಾಗೂ ಇತರ ಆರೋಪಿಗಳು ಈಗ ಸೆಷನ್ಸ್ ಕೋರ್ಟ್‌ಗೆ ಶರಣಾಗುವುದು ಅಥವಾ ಪೊಲೀಸರೇ ಅವರನ್ನು ಬಂಧಿಸುವುದು ಅನಿವಾರ್ಯವಾಗಿದೆ.
ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಕೆಳ ನ್ಯಾಯಾಲಯದಲ್ಲಿ ದೋಷಾರೋಪಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅದರ ಬೆನ್ನಲ್ಲೇ ವಾಸ್ತವಾಧಾರಿತ ವಿಚಾರಣೆ ಪ್ರಾರಂಭವಾಗಲಿದೆ. ಈ ವಿಚಾರಣೆಯಲ್ಲಿ ದರ್ಶನ್ ವಿರುದ್ಧ ಕೊಲೆ, ಸಾಕ್ಷ್ಯ ನಾಶ, ಕಿಡ್ನ್ಯಾಪ್ ಮುಂತಾದ ಅಪರಾಧಗಳ ಕುರಿತು ನಿಗದಿತ ವಿಧಿಗಳಂತೆ ವಿಚಾರಣೆ ನಡೆಯಲಿದೆ.
ಪ್ರಾಸಿಕ್ಯೂಷನ್ ಈಗಾಗಲೇ ಸುಪ್ರೀಂಕೋರ್ಟ್‌ಗೆ ವಿಚಾರಣೆ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದಾಗಿ ಹೇಳಲಾಗುತ್ತಿದೆ . ಆದ್ದರಿಂದ, ಕೆಳ ನ್ಯಾಯಾಲಯದ ಮಟ್ಟದಲ್ಲಿ ಮುಂದಿನ 6 ತಿಂಗಳಲ್ಲಿ ತೀರ್ಪು ಬರಲಿರುವ ಸಾಧ್ಯತೆ ಬಹಳಷ್ಟು ಇದೆ. ಇಲ್ಲಿಯವರೆಗಾದ್ರೂ ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ಇಲ್ಲದ ಕಾರಣ ಜೈಲಿನಲ್ಲಿ ಇರಬೇಕಾಗುತ್ತದೆ. ಪ್ರಕರಣದ ತೀರ್ಪು ಹೊರಬರುವವರೆಗೂ ಯಾವುದೇ ರಿಲೀಫ್ ಸಾಧ್ಯವಿಲ್ಲ.
ಕೆಳ ನ್ಯಾಯಾಲಯ ದರ್ಶನ್ ವಿರುದ್ಧದ ಚಾರ್ಜ್‌ಗಳ ಪ್ರಕಾರ, ಅವರು ಅಪರಾಧ ಮಾಡಿದ್ದಾರೆ ಎಂಬುದು ಸಾಬೀತಾದರೆ, ಶಿಕ್ಷೆಯ ಅವಧಿಯ ಬಗ್ಗೆ ತೀರ್ಮಾನವಾಗುತ್ತದೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಅವರು ನಿರಾಪರಾಧಿ ಎಂದು ತೀರ್ಪು ಬರಬಹುದು. ಒಂದೆಡೆ ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಂತಾಗಬಹುದು ಅಥವಾ ಮತ್ತೊಂದೆಡೆ, ಹೆಚ್ಚು ವರ್ಷಗಳ ಶಿಕ್ಷೆ ಎದುರಾಗಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ.
ವರದಿ : ಲಾವಣ್ಯ ಅನಿಗೋಳ