ಕಾಡಾನೆ ಜೊತೆ ಸೆಲ್ಫಿ ಸಾಹಸಕ್ಕೆ ₹25,000 ದಂಡ!

ಬಂಡೀಪುರ ಅರಣ್ಯದಲ್ಲಿ ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಯತ್ನಿಸಿದ ವ್ಯಕ್ತಿಗೆ ಬಿಸಿ ಮುಟ್ಟಿದೆ. ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ₹25 ಸಾವಿರ ದಂಡ ವಿಧಿಸಿದೆ. ಜೊತೆಗೆ, ವ್ಯಕ್ತಿಗೆ ಶನಿವಾರ ಮತ್ತು ಭಾನುವಾರ ಎರಡು ದಿನ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಸೇವಾ ಶಿಕ್ಷೆ ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ವನ್ಯಜೀವಿ ಅಭಯಾರಣ್ಯದಲ್ಲಿ ಈ ಘಟನೆ ನಡೆದಿತ್ತು. ಬಸವರಾಜು ಎಂಬುವವರು ತಮ್ಮ ಸ್ನೇಹಿತರೊಂದಿಗೆ ಕಾಡಾನೆ ಬಳಿ ಸೆಲ್ಫಿ ತೆಗೆಯಲು ಮುಂದಾದರು. ಈ ವೇಳೆ ಆನೆ ದಾಳಿ ನಡೆಸಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗಳ ಬಳಿಕ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದ ಬಸವರಾಜು ಅವರನ್ನು, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ, ಬಂಡೀಪುರಕ್ಕೆ ಕರೆಸಿ ₹25,000 ದಂಡ ವಿಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅರಣ್ಯ ಉಪಸಂರಕ್ಷಣಾಧಿಕಾರಿ ಎನ್.ಪಿ.ನವೀನ್‌ ಕುಮಾರ್‌ ಅವರು, ಬಸವರಾಜುವಿಗೆ ಶನಿವಾರ ಮತ್ತು ಭಾನುವಾರ ಮೇಲುಕಾಮನಹಳ್ಳಿ ಬಳಿ ಬಂಡೀಪುರ ಅರಣ್ಯದ ಪ್ರವೇಶ ದ್ವಾರದ ಬಳಿ ನಿಂತು, ಕಾಡಿನೊಳಗಿನ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ.

‘ನನಗಾದ ಅನುಭವ ನಿಮಗಾಗಬಾರದು. ವಾಹನ ಇಳಿಯದೆ ಮಾತ್ರ ತೆರಳಿ’ ಎಂಬ ಸಂದೇಶವನ್ನು ನೀಡಬೇಕೆಂಬ ಹೊಣೆಗಾರಿಕೆ ನೀಡಲಾಗಿದೆ ಎಂಬ ಮಾಹಿತಿಯನ್ನ ನೀಡಿದ್ದಾರೆ. ಒಟ್ಟಾರೆ ಕಾಡು ಪ್ರದೇಶಗಳಲ್ಲಿ ವಾಹನದಿಂದ ಇಳಿಯುವುದು ಕಾನೂನುಬಾಹಿರ. ಪ್ರಾಣಿಗಳ ಜೊತೆ ಸೆಲ್ಫಿ ಅಥವಾ ಸಮೀಪ ಹೋಗುವ ಬಗೆಗಿನ ವರ್ತನೆಗಳು ಜೀವನದ ಅಪಾಯಕ್ಕೆ ಕಾರಣವಾಗಬಹುದು ಎಂದು ಬಂಡೀಪುರ ಅರಣ್ಯ ಇಲಾಖೆ ಪುನರ್ ಎಚ್ಚರಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author