ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ, ರಾಜ್ಯದ ಹಲವೆಡೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಆಗಸ್ಟ್ 14ರಿಂದ 20ರವರೆಗೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಮತ್ತು ಅರೆಂಜ್ ಅಲರ್ಟ್ ಘೋಷಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರ್ಗಿ, ವಿಜಯಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆಗಸ್ಟ್ 20ರವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಆಗಸ್ಟ್ 16ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಆದರೆ ಆ.17ರಿಂದ ಆ.20ರವರೆಗೆ ಈ ಭಾಗದಲ್ಲಿ ಅತಿ ಭಾರಿ ಮಳೆಯ ಅರೆಂಜ್ ಅಲರ್ಟ್ ಜಾರಿಗೆ ಬರಲಿದೆ. ಆಗಸ್ಟ್ 14 ಮತ್ತು 15ರಂದು ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.
ಈ ವಾರ ನೈಋತ್ಯ ಮಾಂಸೂನ್ ಚುರುಕುಗೊಳ್ಳುತ್ತಿರುವುದರಿಂದ, ರಾಜ್ಯದ ಒಳನಾಡು ಮತ್ತು ಕರಾವಳಿಯಲ್ಲಿ ಮಳೆಯ ತೀವ್ರತೆ ಹೆಚ್ಚಲಿದೆ. ಹವಾಮಾನ ಇಲಾಖೆ ಇಂದು ಮತ್ತು ನಾಳೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬುಧವಾರ ಕಲಬುರಗಿ ಜಿಲ್ಲೆಯ ಆಳಂದ, ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ತಲಾ 5 ಸೆಂ.ಮೀ., ಉತ್ತರ ಕನ್ನಡ ಜಿಲ್ಲೆಯ ಮಂಕಿ, ಉಡುಪಿ ಜಿಲ್ಲೆಯ ಕುಂದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿ ನಗರ, ಯಾದಗಿರಿ ಜಿಲ್ಲೆಯ ಕುಕ್ಕೇರಿ, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ಇತ್ತೀಚೆಗೆ ತಾಪಮಾನದಲ್ಲೂ ಸ್ಪಷ್ಟ ಕುಸಿತ ಕಂಡುಬಂದಿದೆ. ಸೋಮವಾರ – 27.2°ಸೆಲ್ಸಿಯಸ್, ಮಂಗಳವಾರ – 25.3°ಸೆ, ಬುಧವಾರ – 22.6°ಸೆ, ಗುರುವಾರ – ತಾಪಮಾನ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದ್ದು, ಸುಮಾರು 25°ಸೆಲ್ಸಿಯಸ್ ಇರಲಿದೆ.
ಆದರೆ ಮುಂದಿನ ಕೆಲವು ದಿನಗಳು ಮೋಡ ಕವಿದ ವಾತಾವರಣ ಮತ್ತು ಹಗುರ ಮಳೆಯ ಸಾಧ್ಯತೆ ಇದೆ. ಜಿಲ್ಲೆಯ ಜನತೆ, ರೈತರು ಹಾಗೂ ಪ್ರವಾಸಿಗರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.

