ರಾಜ್ಯದಲ್ಲಿ ಮುಂದಿನ ಒಂದು ವಾರ ನೈರುತ್ಯ ಮಾನ್ಸೂನ್ ಚುರುಕಾಗಲಿದ್ದು, ಕರಾವಳಿ ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಆಗಸ್ಟ್ 15 ರಿಂದ ಮೂರು ದಿನಗಳು ಜೋರು ಮಳೆಯಾಗಲಿದೆ.
ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಮೂರು ದಿನ ಮಳೆಯಾಗಲಿದ್ದು, ಥಂಡಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವಾರದಿಂದ ನಗರದಲ್ಲಿ ಹಗಲಿನ ವೇಳೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆ ಸುರಿಯುತ್ತಿದೆ. ಶುಕ್ರವಾರ ಕೂಡ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಗಾಳಿಯ ವೇಗವು ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ಇರಲಿದೆ. ಕನಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಗುರುವಾರ ಕೂಡ ಬೆಂಗಳೂರು ನಗರದ ಕೆಲವು ಕಡೆ ಮಳೆಯಾಗಿದೆ. ಪ್ರಮುಖವಾಗಿ ಜಯನಗರ, ನಾಯಂಡಹಳ್ಳಿ, ಆರ್‌ಆರ್ ನಗರ, ಕೋರಮಂಗಲ, ವಿದ್ಯಾಪೀಠ, ಪಟ್ಟಾಭಿರಾಮನಗರ, ಬಿಳೇಕಹಳ್ಳಿ, ರಾಜಾಜಿನಗರ, ಬಸವೇಶ್ವರನಗರ, ಕಾಟನ್‌ಪೇಟೆ, ಚಾಮರಾಜಪೇಟೆ, ಜಕ್ಕೂರು, ದೊರೆಸಾನಿಪಾಳ್ಯ, ಎಚ್. ಗೊಲ್ಲಹಳ್ಳಿ ಸೇರಿದಂತೆ ಕೆಲವು ಕಡೆ ಭರ್ಜರಿ ಮಳೆಯಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ