ದೇಶದಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಭಕ್ತರು ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಿದ್ದರೂ, ಕೃಷ್ಣನ ನಾಡಾದ ಉಡುಪಿಯಲ್ಲಿ ಮಾತ್ರ ಅಷ್ಟಮಿಯ ಸಂಭ್ರಮವಿಲ್ಲ. ಶ್ರೀ ಕೃಷ್ಣ ಮಠದ ಪ್ರಸಿದ್ಧ ಉತ್ಸವ ಈ ವರ್ಷ ಸಪ್ಟೆಂಬರ್ 14 ರಂದು ನಡೆಯಲಿದೆ. ಇದರಿಂದಾಗಿ ಇಂದು ಉಡುಪಿಗೆ ಆಗಮಿಸಿದ ಭಕ್ತರೂ, ವ್ಯಾಪಾರಿಗಳೂ ನಿರಾಸೆಗೊಂಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಚಂದ್ರಮಾನದ ಬದಲು ಸೌರಮಾನ ಪದ್ಧತಿಯಂತೆ ಹಬ್ಬಗಳನ್ನು ಆಚರಿಸುವ ಅಪರೂಪದ ಸಂಪ್ರದಾಯ ಇದೆ. ಈ ಕಾರಣದಿಂದ, ಜನ್ಮಾಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರದ ಸಂಯೋಗದ ದಿನವನ್ನು ಶ್ರೀಕೃಷ್ಣ ಜಯಂತಿಯಾಗಿ ಗುರುತಿಸಲಾಗುತ್ತದೆ. ಈ ವರ್ಷ ಅದು ಸೆಪ್ಟೆಂಬರ್ 14 ರಂದು ಬರುವ ಹಿನ್ನೆಲೆಯಲ್ಲಿ, ಪ್ರಧಾನ ಉತ್ಸವವೂ ಆ ದಿನಕ್ಕೆ ಮುಂದೂಡಲಾಗಿದೆ.
ಜನ್ಮಾಷ್ಟಮಿಯನ್ನು ಇಂದು ಆಚರಿಸುತ್ತಿರುವ ರಾಜ್ಯದ ಇತರ ಭಾಗಗಳ ಭಕ್ತರಿಗೆ ಉಡುಪಿಯ ಕೃಷ್ಣ ಮಠ ಸಾಂಕೇತಿಕ ಪ್ರಧಾನಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಶ್ರಾವಣ ಅಷ್ಟಮಿಗೆ ವಿಶೇಷವಾಗಿರುವ ಬಾಲಕೃಷ್ಣ ವೇಶ, ಮೊಸರು ಕುಡಿಕೆ, ರಥಬೀದಿ ಉತ್ಸವ, ಮಠದ ವಿಶೇಷ ಶೋಭಾಯಾತ್ರೆ ಸೇರಿದಂತೆ ಯಾವುದೇ ಉತ್ಸವ ಕಾರ್ಯಕ್ರಮಗಳಿಲ್ಲ.
ಉಡುಪಿಗೆ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು, ಶ್ರೀ ಕೃಷ್ಣ ದರ್ಶನ ಪಡೆದರೂ, ನಿರೀಕ್ಷಿಸಿದ ಹಬ್ಬದ ಸಂಭ್ರಮವಿಲ್ಲದೆ ನಿರಾಸೆಗೊಂಡರು. ಶ್ರದ್ಧೆಯಿಂದ ಕಾಲ ಸಮರ್ಪಣೆ ಮಾಡಿಕೊಂಡು ಹಿಂದಿರುಗಿದರು.
ಹಾಸನ, ಚಿಕ್ಕಮಗಳೂರು ಭಾಗದಿಂದ ಬಂದ ನೂರಾರು ಹೂವಿನ ವ್ಯಾಪಾರಿಗಳು, ಉಡುಪಿಯಲ್ಲಿ ಅಷ್ಟಮಿಯ ವ್ಯಾಪಾರದಲ್ಲಿ ಲಾಭ ಆಸೆ ಇಟ್ಟು ಬಂದಿದ್ದರಾದರೂ, ಹಬ್ಬ ಮುಂದೂಡಲ್ಪಟ್ಟ ಕಾರಣ ವ್ಯಾಪಾರದ ಮೇಲೆ ಪರಿಣಾಮ ಬಿದ್ದಿದೆ. ಅಷ್ಟಮಿಗೆ ನಾಲ್ಕು ಕಾಸು ದುಡಿಮೆ ಆಗುತ್ತೆ ಅನ್ನಿಕೊಂಡಿದ್ದೇವೆ, ಈ ಬಾರಿ ಕೈ ಸುಟ್ಟಂತಾಯಿತು ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.