ಧರ್ಮಸ್ಥಳ ಪ್ರಕರಣ ದಿನಕ್ಕೂಂದು ತಿರುವು ಪಡೆದುಕೊಳ್ಳುತ್ತಿದೆ. ತೀವ್ರ ಕುತೂಹಲ ಕೆರಳಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು BJP ಆರೋಪ ಮಾಡಿದೆ. ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾತನಾಡಿದ ಶಾಸಕ ಎಸ್ಆರ್ ವಿಶ್ವನಾಥ್, ನಾಳೆ ಸದನದಲ್ಲಿ ಸರ್ಕಾರದ ಉತ್ತರವನ್ನು ಎದುರು ನೋಡುತ್ತಿದ್ದೇವೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡೋದನ್ನು ನಾವು ಸಹಿಸಲ್ಲ.
ತನಿಖೆ ನಡೆಯುವುದಕ್ಕೆ ಯಾರ ವಿರೋಧವೂ ಇಲ್ಲ. ನಿನ್ನೆ ಖಾವಂದರನ್ನು ಭೇಟಿಯಾದಾಗ, ಖಾವಂದರು ಕೂಡ ತನಿಖೆ ನಡೆಯಲಿ ಅಂತ ಹೇಳಿದ್ದಾರೆ. ಆದರೆ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿರುವುದಕ್ಕೆ ನೊಂದುಕೊಂಡರು. ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಯುಟ್ಯೂಬರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸಿದ್ದತೆ ಮಾಡಿಕೊಂಡಿದ್ದೇವೆ. ಅನಾಮಿಕನನ್ನು ಮೊದಲು ತನಿಖೆಗೆ ಒಳಪಡಿಸಬೇಕಾಗಿತ್ತು. ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದಂತೆ ಎರಡು ಎಸ್ಐಟಿ ತಂಡಗಳ ರಚನೆಯಾಗಬೇಕು. ಆಗ ಅನಾಮಿಕನ ಹಿಂದೆ ಯಾರಿದ್ದಾರೆ ಷಡ್ಯಂತರ ಯಾರು ನಡೆಸುತ್ತಿದ್ದಾರೆ ಅಂತ ಹೊರಬರುತ್ತದೆ. ಆ ಯೂಟ್ಯೂಬರ್ ವಿರುದ್ಧ ನಾಳೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಎಸ್.ಆರ್.ವಿಶ್ವನಾಥ್ ಮಾಹಿತಿ ಮಂಡಿಸಿದರು.
ನಮ್ಮ ಧರ್ಮ, ನಮ್ಮ ಹಕ್ಕು, ಶಿಕ್ಷಿಸಿ ಶಿಕ್ಷಿಸಿ ಹಿಂದೂ ವಿರೋಧಿಗಳನ್ನು ಶಿಕ್ಷಿಸಿ ಎನ್ನುವ ಭಿತ್ತಿ ಪತ್ರಗಳನ್ನು ಹಿಡಿದು ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಯ ಮುಖಂಡರು ಘೋಷಣೆ ಕೂಗಿದರು. ದೇವಸ್ಥಾನ ಆವರಣದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದ್ದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ