Monday, October 6, 2025

Latest Posts

ಜೆಡಿಎಸ್‌ ಮೇಲುಗೈ ಕಾಂಗ್ರೆಸ್ ಗೇಮ್‌ ಔಟ್!

- Advertisement -

ಹಾಸನದಲ್ಲಿ ಕಾಂಗ್ರೆಸ್‌ ಹಿಂದಿಕ್ಕಿ ಜೆಡಿಎಸ್‌ ಮತ್ತೆ ಮೇಲುಗೈ ಸಾಧಿಸಿದೆ. ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 13 ಸ್ಥಾನಗಳ ಪೈಕಿ, 12 ಮಂದಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಒಂದು ಸ್ಥಾನಕ್ಕೆ ಆಗಸ್ಟ್ 21ರಂದು ಚುನಾವಣೆ ನಡೆಯಲಿದೆ.

ಬ್ಯಾಂಕಿನ 13 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು. ಇದೀಗ 12 ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಅವಿರೋಧವಾಗಿ ಆಯ್ಕೆಗೊಂಡಿದ್ದು, ಹಾಸನ ಜಿಲ್ಲೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಪ್ರಾಬಲ್ಯ ಮುಂದುವರಿದಂತಾಗಿದೆ. ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಸತೀಶ್ ಹೊನ್ನವಳ್ಳಿ, ಸೋಮನಹಳ್ಳಿ ನಾಗರಾಜ್‌, ಬೇಲೂರು ನಾಗರಾಜ್, ಜಗದೀಶ್, ಅರಸೀಕೆರೆ ಶೇಖರಪ್ಪ, ಹನುಮಗೌಡ, ಮಂಜೇಗೌಡ, ಗಂಗಾಧ‌ರ್, ಪಾಪಣ್ಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಾಲಿ ನಿರ್ದೇಶಕ ಗಿರೀಶ್ ಚನ್ನವೀರಪ್ಪ ಸ್ಪರ್ಧೆಗಿಳಿದಿರುವ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳ ಕ್ಷೇತ್ರದಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ರುದ್ರೇಶ್ ಎದುರಾಳಿಯಾಗಿದ್ದು, ಕ್ಷೇತ್ರಕ್ಕೆ ಮಾತ್ರ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.

ಈ ಬಾರಿ ಬ್ಯಾಂಕಿನ ಚುಕ್ಕಾಣಿ ಹಿಡಿಯುವ ಉಮೇದಿನಲ್ಲಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್, ಈ ಬಾರಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆ ಇತ್ತು. ಇದೀಗ ಉಳಿದ ಎರಡು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಹುತೇಕ ಜೆಡಿಎಸ್‌ನ ಬೆಂಬಲಿತ ಅಭ್ಯರ್ಥಿಯೇ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ನಿರ್ದೇಶಕರ ಸ್ಥಾನಕ್ಕೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ತಲೆಕೆಡಿಸಿಕೊಂಡಿಲ್ಲ. 13 ನಿರ್ದೇಶಕರ ಸ್ಥಾನಗಳ ಪೈಕಿ 11ರಲ್ಲಿ ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದು, ಈ ಮೂಲಕ ಜೆಡಿಎಸ್‌ನ ಅಭ್ಯರ್ಥಿಯೇ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ನಿರ್ದೇಶಕರಾಗಿ ಬಹುತೇಕ ಜೆಡಿಎಸ್ ಹಾಗೂ ರೇವಣ್ಣ ಕುಟುಂಬದ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯಾಗಿದ್ದು ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್ ರೇವಣ್ಣ ಬ್ಯಾಂಕಿನ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಈಗಾಗಲೇ ಎರಡು ಬಾರಿ ಅಧ್ಯಕ್ಷರಾಗಿರುವ ಸೋಮನಹಳ್ಳಿ ನಾಗರಾಜ್‌ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಅಧ್ಯಕ್ಷ ಸ್ಥಾನಕ್ಕೆ ಬೇರೆಯವರು ಸ್ಪರ್ಧಿಸುವ ಸಾಧ್ಯತೆ ಕಡಿಮೆ ಇದ್ದು ಸೂರಜ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮತ್ತೊಮ್ಮೆ ಎಚ್.ಡಿ. ರೇವಣ್ಣ ಕುಟುಂಬದ ಅಧಿಪತ್ಯ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss