ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯ ಪರಿಣಾಮದಿಂದ ಕೊಡಗು, ಮಲೆನಾಡು, ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನಿರಂತರ ಮಳೆಯಿಂದಾಗಿ ರಾಜ್ಯದ ಹಲವು ನದಿಗಳು ಹಾಗೂ ಜಲಾಶಯಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹಲವೆಡೆ ಪ್ರವಾಹದ ಎಚ್ಚರಿಕೆ ಘೋಷಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ ತೀವ್ರವಾಗಿ ಕಂಡು ಬರುತ್ತಿದೆ. ನೆರೆಯಿಂದಾಗಿ 8 ಸೇತುವೆಗಳು ಮುಳುಗಡೆಯಾಗಿವೆ. ಪರಿಣಾಮವಾಗಿ 16 ಗ್ರಾಮಗಳು ರಸ್ತೆಯ ಸಂಪರ್ಕ ಕಳೆದುಕೊಂಡಿವೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರಿನ ಹರಿವು ಇದ್ದು, ಚಿಕ್ಕೋಡಿ ತಾಲ್ಲೂಕುಗಳಲ್ಲಿ ಹಾನಿ ಹೆಚ್ಚಾಗಿದೆ.
ಗದಗ ಜಿಲ್ಲೆಯ ಮಲಪ್ರಭಾ ಜಲಾನಯನ ಪ್ರದೇಶದ ಅನೇಕ ಹಳ್ಳಿಗಳ ಜನರನ್ನು ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಹುಕ್ಕೇರಿ ತಾಲ್ಲೂಕಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಂಡ್ಯ ಜಿಲ್ಲಾಡಳಿತ ರೈತರಿಗೆ ನದಿ ದಂಡೆ ಬಳಿ ಕೃಷಿ ಚಟುವಟಿಕೆ ನಡೆಸಬೇಡಿ, ಜಾನುವಾರುಗಳನ್ನು ಬಿಡಬೇಡಿ ಎಂಬ ಸೂಚನೆ ನೀಡಿದೆ.
ಘಟಪ್ರಭಾ ನದಿಯಲ್ಲಿ 38,000 ಕ್ಯೂಸೆಕ್ ಮತ್ತು ಕೃಷ್ಣಾ ನದಿಯಲ್ಲಿ 67,000 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ನದಿಯ ದಡದಲ್ಲಿರುವ ನಿವಾಸಿಗಳಿಗೆ ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಬೆಳಗಾವಿ, ಸವದತ್ತಿ, ಬೈಲಹೊಂಗಲ, ಕಿತ್ತೂರು, ರಾಮದುರ್ಗ, ಖಾನಾಪುರ ಮತ್ತು ಹುಕ್ಕೇರಿ ತಾಲ್ಲೂಕುಗಳಲ್ಲಿನ ಶಾಲೆಗಳು, ಅಂಗನವಾಡಿಗಳು ಹಾಗೂ ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತವು ಸೋಮವಾರ ಮತ್ತು ಮಂಗಳವಾರ ರಜೆ ಘೋಷಿಸಿದೆ.
ಆಗಸ್ಟ್ 23ರ ವರೆಗೆ ಭಾರೀ ಮಳೆಯ ಸಂಭವವಿದ್ದು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಪ್ರಕಟಿಸಲಾಗಿದೆ. ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ.