ಪ್ರತಿಭಟನೆಗಳು, ಗದ್ದಲ, ಸಭಾತ್ಯಾಗಗಳ ನಡುವೆ 2025ರ ಮುಂಗಾರು ಅಧಿವೇಶನ ಅಂತ್ಯಗೊಂಡಿದ್ದು, ಲೋಕಸಭೆ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಅವರು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಅಧಿವೇಶನದ ಕೊನೆಯ ದಿನವಾದ ಆಗಸ್ಟ್ 21ರಂದು, ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆ ನಡೆಯಬೇಕಾಗಿತ್ತು. ಆದರೆ ವಿರೋಧ ಪಕ್ಷಗಳ ನಿರಂತರ ಗದ್ದಲದ ಕಾರಣ ಮಧ್ಯಾಹ್ನ 12 ಗಂಟೆಗೆ ಕಲಾಪವನ್ನು ಮುಂದೂಡಲಾಗಿತ್ತು. ನಂತರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಸ್ಪೀಕರ್ ಓಂ ಬಿರ್ಲಾ ಅವರು ಕಲಾಪದ ವಿವರ ನೀಡುತ್ತಾ, ಈ ಅಧಿವೇಶನದಲ್ಲಿ ಒಟ್ಟು 14 ಸರ್ಕಾರಿ ಮಸೂದೆಗಳನ್ನು ಮಂಡಿಸಲಾಗಿದೆ. ಇವರಲ್ಲಿ 12 ಮಸೂದೆಗಳು ಅಂಗೀಕಾರಗೊಂಡಿವೆ. ಜುಲೈ 28 ಮತ್ತು 29 ರಂದು ವಿಶೇಷ ಚರ್ಚೆಗಳು ನಡೆದಿದ್ದು, ಈ ಚರ್ಚೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರದೊಂದಿಗೆ ಮುಕ್ತಾಯಗೊಂಡವು. ಆಗಸ್ಟ್ 18ರಂದು ಬಾಹ್ಯಾಕಾಶ ಸಾಧನೆಗಳ ಕುರಿತಾದ ವಿಶೇಷ ಚರ್ಚೆ ಕೂಡ ನಡೆಯಿತು ಎಂದು ಹೇಳಿದರು.
ಸಂಸತ್ತಿನಲ್ಲಿ ಹೆಚ್ಚುತ್ತಿರುವ ಗದ್ದಲ ಹಾಗೂ ಅಸಭ್ಯ ನಡೆಗೆ ಕಿಡಿಕಾರಿದ ಸ್ಪೀಕರ್, ಇಡೀ ದೇಶ ನಮ್ಮ ನಡವಳಿಕೆಯನ್ನು ಗಮನಿಸುತ್ತಿದೆ. ಜನರು ನಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿ ಕಳಿಸಿರುತ್ತಾರೆ. ಸಂಸತ್ತಿನಲ್ಲಿ ಗೌರವಯುತ ಚರ್ಚೆ ನಡೆಯಬೇಕು. ಆದರೆ ಇತ್ತೀಚೆಗೆ ಕಲಾಪ ಗದ್ದಲದಿಂದಲೇ ಕೂಡಿದ ಸ್ಥಿತಿಯಲ್ಲಿದೆ. ಬಳಕೆಯಾದ ಭಾಷೆ, ಘೋಷಣೆಗಳು ಸಹ ಅಸಭ್ಯತೆಯಲ್ಲಿವೆ. ಇದನ್ನು ಮುಂದಿನ ಅಧಿವೇಶನದಲ್ಲಿ ತಪ್ಪಿಸಬೇಕು ಎಂದು ಎಚ್ಚರಿಸಿದರು.
ಇನ್ನು ಅಧಿವೇಶನದ ಕಾರ್ಯದರ್ಶಿ ಅಂಕಿಅಂಶಗಳನ್ನ ನೋಡೋದಾದ್ರೆ
ಒಟ್ಟು ಚರ್ಚೆಗೆ ಮೀಸಲಾದ ಸಮಯ – 120 ಗಂಟೆ, ಚರ್ಚೆ ನಡೆದ ಸಮಯ ಕೇವಲ 37 ಗಂಟೆ, ಒಟ್ಟು ಕೇಳಲಾದ ಪ್ರಶ್ನೆಗಳು – 419, ಆದ್ರೆ ಕೇವಲ 55 ಪ್ರಶ್ನೆಗಳಿಗಷ್ಟೇ ಮೌಖಿಕವಾಗಿ ಉತ್ತರಿಸಲಾಯಿತು.
ಅಂಗೀಕಾರಗೊಂಡ ಪ್ರಮುಖ ಮಸೂದೆಗಳನ್ನ ನೋಡೋದಾದ್ರೆ ಸರಕು ಸಾಗಣೆ, ಬಂದರುಗಳು, ಗಣಿ ಮತ್ತು ಖನಿಜ ಮಸೂದೆಗಳು, ಕ್ರೀಡಾ ಆಡಳಿತ ಮತ್ತು ಡೋಪಿಂಗ್ ವಿರೋಧಿ ಸುಧಾರಣೆ ಮಸೂದೆ, ಆದಾಯ ತೆರಿಗೆ ಪರಿಷ್ಕರಣೆ ಮತ್ತು ಜಿಎಸ್ಟಿ ತಿದ್ದುಪಡಿ ಮಸೂದೆ, ಸರಕು ಸಾಗಣೆ, ಸಮುದ್ರ ಹಾಗೂ ಕರಾವಳಿ ಸಾಗಣೆ ಸಂಬಂಧಿತ ಕಡಲ ಸುಧಾರಣೆ ಮಸೂದೆ, ಗೋವಾ ರಾಜ್ಯದ ಟ್ರಿಸ್ತಾನ್ ವಿಧಾನಸಭಾ ಸೀಟು ಮರುಹೊಂದಿಕೆ ಮಸೂದೆ, ಆನ್ಲೈನ್ ಗೇಮಿಂಗ್ ನಿಯಂತ್ರಣ ಮಸೂದೆಯನ್ನ ಅಂಗೀಕರಿಸಲಾಗಿದೆ.




