ದೇಶದಲ್ಲಿ ತೆರಿಗೆ ಸುಧಾರಣೆಗಾಗಿ 8 ವರ್ಷಗಳ ಹಿಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲಾಗಿತ್ತು. ಜಿಎಸ್‌ಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಈಗ ಕೇಂದ್ರ ಸರಕಾರ ಮುಂದಾಗಿದೆ. ಈಗಿನ ನಾಲ್ಕು ಜಿಎಸ್‌ಟಿ ಸ್ಲ್ಯಾಬ್‌ಗಳ ಬದಲಿಗೆ ಎರಡು ಸ್ಲ್ಯಾಬ್‌ಗಳ ವ್ಯವಸ್ಥೆ ತರಲು ನೀಡಿರುವ ಪ್ರಸ್ತಾಪಕ್ಕೆ ಸಚಿವರ ಗುಂಪು ಅನುಮೋದನೆ ನೀಡಿದೆ. ಈ ಮೂಲಕ ಜಿಎಸ್‌ಟಿ 2.0 ಜಾರಿಗೆ ದಾರಿ ತೆರೆದಂತಾಗಿದೆ.
ಜಿಎಸ್‌ಟಿ ಸುಧಾರಣೆಗಳ ಪರಿಶೀಲನೆಗಾಗಿ ರಚಿಸಲಾಗಿರುವ ಈ ಗುಂಪಿನಲ್ಲಿ ಆರು ಮಂದಿ ಸಚಿವರಿದ್ದಾರೆ. ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ಸಮಿತಿಗೆ ನೇತೃತ್ವ ವಹಿಸಿದ್ದಾರೆ. ಈ ಗುಂಪಿನಲ್ಲಿ ಬಿಜೆಪಿ ಆಡಳಿತದ ಮೂರು ರಾಜ್ಯಗಳ ಜೊತೆಗೆ ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳಾದ ಕರ್ನಾಟಕದ ಕೃಷ್ಣ ಬೈರೇಗೌಡ ಸೇರಿದಂತೆ ಮೂವರು ಸಚಿವರು ಸಹ ಭಾಗಿಯಾಗಿದ್ದಾರೆ.
ಈಗ ಜಾರಿಗೆ ಇರುವ ಶೇ.5, 12, 18 ಮತ್ತು 28ರ ಜಿಎಸ್‌ಟಿ ಸ್ಲ್ಯಾಬ್‌ಗಳ ಪೈಕಿ ಶೇ.12 ಮತ್ತು ಶೇ.28ರ ಸ್ಲ್ಯಾಬ್‌ಗಳನ್ನು ರದ್ದುಗೊಳಿಸುವುದು. ಶೇ.5 ಮತ್ತು ಶೇ.18ರ ಎರಡು ಸ್ಲ್ಯಾಬ್‌ಗಳು ಮಾತ್ರ ಮುಂದುವರಿಯಲಿವೆ. ಜೊತೆಗೆ, ತಂಬಾಕು ಸೇರಿದಂತೆ 7 ಅಪಾಯಕಾರಿ ಉತ್ಪನ್ನಗಳಿಗೆ ಶೇ.40ರ ‘ಹಾನಿಕಾರಕ ತೆರಿಗೆ’ ವಿಧಿಸುವ ಪ್ರಸ್ತಾಪಕ್ಕೂ ಒಪ್ಪಿಗೆ ದೊರೆತಿದೆ.
ಹೊಸ ವ್ಯವಸ್ಥೆ ಜಾರಿಗೆ ಬಂದರೆ, ಶೇ.12ರ ಜಿಎಸ್‌ಟಿ ಒಳಪಡುವ ಶೇ.99ರಷ್ಟು ಉತ್ಪನ್ನಗಳು ಶೇ.5ರ ಸ್ಲ್ಯಾಬ್‌ಗೆ ಸ್ಥಳಾಂತರಗೊಳ್ಳಲಿದೆ. ಬೆಣ್ಣೆ, ತುಪ್ಪ, ಹಣ್ಣುಗಳ ಜ್ಯೂಸ್, ಕಂಪ್ಯೂಟರ್‌ಗಳಂತಹ ಉತ್ಪನ್ನಗಳ ಬೆಲೆ ಇಳಿಯುವ ಸಾಧ್ಯತೆ ಇದೆ. ಹಾಗೆಯೇ, ಶೇ.28ರ ಜಿಎಸ್‌ಟಿ ವಿಧಿಸಲಾಗುತ್ತಿರುವ ಕಾರು, ಬೈಕ್, ವಾಷಿಂಗ್ ಮೆಷಿನ್, ಎಲೆಕ್ಟ್ರಾನಿಕ್ ಸಾಧನಗಳಂತಹ ಉತ್ಪನ್ನಗಳು ಶೇ.18ರ ಸ್ಲ್ಯಾಬ್‌ಗೆ ಒಳಪಡುವ ಮೂಲಕ ಬಹುಪಾಲು ಉಪಯೋಗದ ವಸ್ತುಗಳ ದರ ಇಳಿಯಲಿದೆ.
SBI ಪ್ರಕಟಿಸಿರುವ ವರದಿ ಪ್ರಕಾರ, ಈ ತೆರಿಗೆ ಕಡಿತದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು ₹85,000 ಕೋಟಿ ನಷ್ಟವಾಗುವ ನಿರೀಕ್ಷೆ ಇದೆ. ಆದರೆ, 2024-25ನೇ ಹಣಕಾಸು ವರ್ಷದವರೆಗೆ ₹22.08 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಕೇವಲ ಜುಲೈ ತಿಂಗಳಲ್ಲಿ ಮಾತ್ರವೇ ₹1.95 ಲಕ್ಷ ಕೋಟಿ ಮೊತ್ತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜಿಎಸ್‌ಟಿ ಸರಳೀಕರಣದ ಸಿಹಿ ಸುದ್ದಿ ನೀಡಿದ್ದು, ಜಿಎಸ್‌ಟಿ 2.0 ಈ ವರ್ಷದ ದೀಪಾವಳಿ ವೇಳೆಗೆ ಜಾರಿಗೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.




