ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಸೇರಿದಂತೆ 30 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಗಿರೀಶ್ ಹಾಗೂ ಇತರರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿ ಬಂದಿದೆ.
ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣವರ್ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ವಕೀಲರ ಜೊತೆ ವಿಚಾರಣೆಗೆ ಹಾಜರಾದರು. ಆದರೆ ಸರ್ವರ್ ಸಮಸ್ಯೆಯಿಂದ ಪ್ರಕರಣ ದಾಖಲಾತಿ ತಡವಾಗಿದ್ದು, ತಾತ್ಕಾಲಿಕವಾಗಿ ನೋಟೀಸ್ ನೀಡಲಾಗಿದೆ. ಈ ಪ್ರಕರಣವು ಬ್ರಹ್ಮಾವರ ಠಾಣೆಯ ಪಿಎಸ್‌ಐ ನೀಡಿದ ದೂರಿನ ಮೇರೆಗೆ ದಾಖಲಾಗಿದೆ. ಇದರ ಪ್ರಕಾರ ಮಹೇಶ್ ಶೆಟ್ಟಿಯ ಬಂಧನ ಸಂದರ್ಭ ಗಿರೀಶ್ ಅಡ್ಡಿಪಡಿಸಿದ್ದಾರಂತೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗಿರೀಶ್, ಮಹೇಶ್ ಶೆಟ್ಟಿಯವರ ಮನೆಗೆ ನೂರು ಜನ ಪೊಲೀಸರು ಬಂದಿದ್ದೇಕೆ ಎಂದು ಕೇಳಿದ್ದೇ ತಪ್ಪಾ? ಅದನ್ನೇ ಗುರಿಯಾಗಿಸಿ ನನ್ನ ಮೇಲೆ, ಜಯಂತ್ ಟಿ ಹಾಗೂ ತಿಮರೋಡಿ ಮೇಲೂ ಎಫ್‌ಐಆರ್ ಹಾಕಲಾಗಿದೆ ಎಂದು ಆರೋಪಿಸಿದರು.
ನಾವು ಯಾವುದಕ್ಕೂ ಹೆದರುವುದಿಲ್ಲ. ಬಂಧನವಾದರೂ ನಾವು ಹಿಂದೇಟು ಹಾಕಲ್ಲ. ಮಹೇಶ್ ಶೆಟ್ಟಿಗೆ ಬಿಪಿ 180 ಇದ್ದರೂ ಅವರಿಗೆ ಸಮಯ ನೀಡದೆ ಬಂಧಿಸಲಾಗಿದೆ. ನಾವು ಕೇಳಿದ ಪ್ರಶ್ನೆಗೂ ಉತ್ತರ ಇಲ್ಲ. ಪೊಲೀಸರು ಈಗ ಭಯ ಹುಟ್ಟಿಸುತ್ತಿದ್ದಾರೆ. ‘ನೆಕ್ಸ್ಟ್ ನೀವು’ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಗಿರೀಶ್ ಮಟ್ಟಣ್ಣವರ್ ಅತ್ಯಾಚಾರಿಗಳ ಅತಿದೊಡ್ಡ ಕುಟುಂಬ ಕುತಂತ್ರ ರೂಪಿಸಿದೆ ಎಂದು ಆರೋಪಿಸಿದರು. ಮಹೇಶ್ ಶೆಟ್ಟಿಯನ್ನು ಖಾಸಗಿ ಕಾರಿನಲ್ಲಿ ಕರೆದೊಯ್ಯಲಾಗಿದ್ದು, ಯಾವುದೇ ರೀತಿಯ ಅಡ್ಡಿ ಮಾಡಿಲ್ಲ. ಆದರೂ 30 ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಎಸ್‌ಐಟಿ ತನಿಖೆ ನಡೆಸುತ್ತಿರುವ ಭೀಮಾ ಸುಳ್ಳು ಹೇಳುತ್ತಿದ್ದಾನೆ. ಆ ಸುಳ್ಳನ್ನೇ ಆಧರಿಸಿ ಮಹೇಶ್ ಶೆಟ್ಟಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗಿರೀಶ್ ಮಟ್ಟಣ್ಣವರ್ ಅವರ ಹೇಳಿಕೆಗೆ ಅನುಸಾರ, ಮಹೇಶ್ ಶೆಟ್ಟಿ ತಿಮರೋಡಿಯ ವಿರುದ್ಧ ಈಗಾಗಲೇ 20 ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ನಿನ್ನೆ ಸಮೀರ್ ಎಂ.ಡಿಯ ಮನೆಗೂ ಪೊಲೀಸರು ಸುತ್ತುವರೆದಿದ್ದರು. ಬೇಲ್ ಸಿಕ್ಕದಿದ್ದರೆ ಬಂಧನ ಆಗುತ್ತಿತ್ತು. ನಿನ್ನೆ ನಾನು ಸಹಕಾರ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಬಂಧನಕ್ಕೆ ಮುಂದಾಗಿದ್ದಾರೆ ಎಂದರು.

