ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರೀ ಮಳೆಯಿಂದ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಮೋಲಿ ಜಿಲ್ಲೆ ತೀವ್ರವಾಗಿ ಪರಿಣಾಮಕ್ಕೊಳಗಾಗಿದ್ದು, ಥರಾಲಿ ಬಜಾರ್, ರಾಡಿಬಾಗ್ ಮತ್ತು ಚೆಪ್ಡೊ ಗ್ರಾಮಗಳು ಅತ್ಯಧಿಕ ಹಾನಿಗೆ ಸಿಲುಕಿವೆ. ಪ್ರವಾಹದ ಪರಿಣಾಮವಾಗಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಚೆಪ್ಡಾನ್ ಮಾರುಕಟ್ಟೆ ಪ್ರದೇಶದಲ್ಲಿ ಹಲವು ಅಂಗಡಿಗಳು ಸಂಪೂರ್ಣ ಹಾನಿಗೊಂಡಿದ್ದು, ರಸ್ತೆಗಳ ಮೇಲೆ ಬಿದ್ದಿರುವ ಮಣ್ಣಿನ ಅವಶೇಷಗಳು ಮತ್ತು ಮರಗಳು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ. ಥರಾಲಿ-ಗ್ವಾಲ್ಡಮ್ ಮತ್ತು ಥರಾಲಿ-ಸಗ್ವಾರಾ ರಸ್ತೆಗಳು ಮುಚ್ಚಲ್ಪಟ್ಟಿದ್ದು, ಹಲವಾರು ಭಾಗಗಳಲ್ಲಿ ಸಂಪರ್ಕ ಕಡಿತಗೊಂಡಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣವೇ NDRF ಹಾಗೂ SDRF ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ಆರಂಭಿಸಿವೆ. ಜಿಲ್ಲಾಧಿಕಾರಿ ಕೂಡ ತಂಡಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಥರಾಲಿ ತಾಲ್ಲೂಕಿನ ಸಗ್ವಾರಾ ಗ್ರಾಮದಲ್ಲಿ 20 ವರ್ಷದ ಯುವತಿಯೊಬ್ಬಳು ಮನೆ ಮಣ್ಣುಸಿಡಿ ಹಾಗೂ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾಗಿ ವರದಿಯಾಗಿದೆ. ಜೊತೆಗೆ, ಚೆಪ್ಡಾನ್ ಮಾರುಕಟ್ಟೆ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಯು ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ.
ಮಿಂಗ್ ಗಧೇರಾ ಹಾಗೂ ತುನ್ರಿ ಗಧೇರಾ ಪ್ರದೇಶಗಳಲ್ಲಿ ಭಾರೀ ಮಣ್ಣುಚರಿತದಿಂದ ರಸ್ತೆಗಳು ಸಂಪೂರ್ಣ ಬಂದ್ ಆಗಿದ್ದು, ಕರ್ಣಪ್ರಯಾಗ್-ಗ್ವಾಲ್ಡಮ್ ರಾಷ್ಟ್ರೀಯ ಹೆದ್ದಾರಿ, ಡುಂಗ್ರಿ ರಸ್ತೆ ಹಾಗೂ ಸಗ್ವಾರಾ ಮಾರ್ಗಗಳು ಕೂಡ ಬಂದ್ ಮಾಡಲಾಗಿದೆ. ಇದರ ಪರಿಣಾಮಾಗಿ ಸ್ಥಳೀಯರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಡೆಹ್ರಾಡೂನ್, ತೆಹ್ರಿ, ಪೌರಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್ ಮತ್ತು ಅಲ್ಮೋರಾ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಗಾಳಿಯ ಜೊತೆಗೆ ಗುಡುಗು–ಮಿಂಚಿನ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜೀವ ರಕ್ಷಣೆ ದೃಷ್ಟಿಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.