ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದವರ ಬುಡಕ್ಕೆ, ಬೆಂಕಿ ಬಿದ್ದಿದೆ. ಮಾಸ್ಕ್ಮ್ಯಾನ್ ಚಿನ್ನಯ್ಯನವರು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್, ಸಮೀರ್ ಸೇರಿದಂತೆ, ಹಲವರ ಹೆಸರು ಹೇಳಿದ್ದಾನೆ. ಆತ ಹೇಳಿದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲು, ಎಸ್ಐಟಿ ಮುಂದಾಗಿದೆ.
ಮೊದಲ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ, ಸರ್ಚ್ ವಾರೆಂಟ್ ಸಮೇತ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ರು. ಮನೆಯ ಮೂಲೆ ಮೂಲೆಗಳನ್ನೂ ತಡಕಾಡಿದ್ದಾರೆ. ಚಿನ್ನಯ್ಯ ಉಳಿದುಕೊಳ್ಳುತ್ತಿದ್ದ ಕೊಠಡಿಯಲ್ಲಿ ಆಂಡ್ರ್ಯಾಯ್ಡ್ ಮೊಬೈಲ್, ಚಾರ್ಜರ್, ಬಟ್ಟೆಗಳು ಸಿಕ್ಕಿದ್ದು, ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಪ್ರತಿಯೊಂದು ವಸ್ತುವಿನ ವಿವರಗಳನ್ನು ಬರೆದುಕೊಳ್ಳಲಾಗಿದ್ದು, ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಎಲ್ಲಾ ವಸ್ತುಗಳನ್ನು ಸೀಜ್ ಮಾಡಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಆಗಸ್ಟ್ 26ರ ತನಿಖಾ ಪ್ರಗತಿ ಬಗ್ಗೆ ಗೃಹ ಸಚಿವ ಪರಮೇಶ್ವರ್ಗೆ, DG IGP ಎಂ.ಎ. ಸಲೀಂ ಸಂಪೂರ್ಣ ಮಾಹಿತಿ ನೀಡಿದ್ದಾರೆ. ತಿಮರೋಡಿ ಮನೆಯಲ್ಲಿ ನಡೆದ ಮಹಜರು ಪ್ರಕ್ರಿಯೆ, ಅಲ್ಲಿ ಸಿಕ್ಕಿದ್ದೇನು. ಸಿಕ್ಕ ವಸ್ತುಗಳನ್ನು ಏನು ಮಾಡಲಾಯ್ತು? ಮುಂದಿನ ತನಿಖಾ ಮಾದರಿ, ಮುಂದಿನ ನಡೆ, ನಿರ್ಧಾರಗಳ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಪರಮೇಶ್ವರ್ ಜೊತೆಗೆ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಮತ್ತೊಂದೆಡೆ, ತಿಮರೋಡಿ ಸಂಬಂಧಿಕರ ಕಾರಿನಲ್ಲೇ, ಚಿನ್ನಯ್ಯ ವಿಚಾರಣೆಗೆ ಬರುತ್ತಿದ್ದ. ಹೀಗಾಗಿ ಕಾರು ಮಾಲೀಕ ಪ್ರಮೋದ್, ತಿಮರೋಡಿ ನಂಟಿನ ಬಗ್ಗೆಯೂ ತನಿಖೆ ಮಾಡಲಾಗ್ತಿದೆ. ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ದಾಖಲೆಗಳ ಹುಡುಕಾಟದಲ್ಲೂ, ಅಧಿಕಾರಿಗಳು ನಿರತರಾಗಿದ್ದಾರೆ. ಶವಗಳನ್ನು ಹೂತಿದ್ದಾಗಿ ಹೇಳಿದ್ದ ಚಿನ್ನಯ್ಯನ ಹೇಳಿಕೆಗೆ, ಪೂರಕವಾದ ಸಾಕ್ಷಿಗಳನ್ನು ಕಲೆ ಹಾಕಲಾಗ್ತಿದೆ. 2000ರಿಂದ 2016ರವರೆಗೆ ಕರ್ತವ್ಯ ನಿರ್ವಹಿಸಿದ್ದವರಿಗೆ, ನೋಟಿಸ್ ನೀಡಲಾಗಿದೆ. ಮಾಜಿ ಪಿಡಿಒಗಳು, ಅಧಿಕಾರಿಗಳ ವಿಚಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಒಟ್ನಲ್ಲಿ ಮಾಸ್ಕ್ಮ್ಯಾನ್ ಚಿನ್ನಯ್ಯನ ಜೊತೆ ಸೂತ್ರಧಾರಿಗಳನ್ನೂ ಲಾಕ್ ಮಾಡಲು, ಎಸ್ಐಟಿ ಬಲೆ ಹೆಣೀತಿದೆ.