ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಮಾಧಿ ಕೆಡವಿದ ಬಳಿಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಕಣ್ಣೀರಿಟ್ಟಿದ್ದರು. ಈ ಜಾಗದಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಅಂತಾ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಮತ್ತೊಂದು ಕಡೆ ಅರಣ್ಯಾಧಿಕಾರಿಗಳ ಪತ್ರದಿಂದ, ಸ್ಟುಡಿಯೋ ಭವಿಷ್ಯವೇ ಬದಲಾಗಿ ಹೋಗಿದೆ.
1970ರಲ್ಲಿ ಹಿರಿನಯ ನಟ ಟಿ.ಎನ್. ಬಾಲಕೃಷ್ಣ ಅವರಿಗೆ 20 ಎಕರೆ ಅರಣ್ಯ ಭೂಮಿ ನೀಡಲಾಗಿತ್ತು. ಅಭಿಮಾನ್ ಚಲನಚಿತ್ರ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕಾಗಿ, 20 ವರ್ಷಗಳ ಲೀಸ್‌ಗೆ ನೀಡಲಾಗಿತ್ತು. ಆ ಸಮಯದಲ್ಲಿ ಸರ್ಕಾರದ ಆದೇಶದಲ್ಲಿ ಸ್ಪಷ್ಟ ಷರತ್ತುಗಳನ್ನು ಕೂಡ ಹಾಕಿತ್ತು.
ಈ ಭೂಮಿಯನ್ನು ಸ್ಟುಡಿಯೋ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ, ಪರಭಾರೆ ಮಾಡಬಾರದು. ಷರತ್ತು ಉಲ್ಲಂಘನೆ ಆಯ್ತು ಅಂದ್ರೆ ಭೂಮಿಯನ್ನು ಹಿಂಪಡೆಸಿಕೊಳ್ಳುವ ಹಕ್ಕು ಸರ್ಕಾರಕ್ಕಿದೆ. ಹೀಗೆ ಹಲವು ಷರತ್ತುಗಳನ್ನು ವಿಧಿಸಿತ್ತು.
2004ಕ್ಕೆ ಬರುವಾಗ, ಬಾಲಕೃಷ್ಣ ಅವರ ಮಕ್ಕಳು ಶ್ರೀನಿವಾಸ್ ಮತ್ತು ಗಣೇಶ್ ಆರ್ಥಿಕ ಸಂಕಷ್ಟ ಅನ್ನೋ ನೆಪ ಹೇಳಿದರು. ಜಿಲ್ಲಾಧಿಕಾರಿಗಳ ಬಳಿ 20 ಎಕರೆ ಪೈಕಿ 10 ಎಕರೆ ಮಾರಲು ಒಪ್ಪಿಗೆ ಕೇಳಿದರು. ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರ ಬಳಸಿ ಅನುಮತಿ ಕೊಟ್ಟರು. ಇದನ್ನು ಕಾನೂನಾತ್ಮಕವಾಗಿ ನೋಡಿದ್ರೆ ಇದು ಸರ್ಕಾರದ 1970ರ ಆದೇಶದ ಸ್ಪಷ್ಟ ಉಲ್ಲಂಘನೆ. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಬಳಸುತ್ತೇವೆ ಅನ್ನೋ ಭರವಸೆ ಕೊಟ್ಟರೂ, ಇಂದಿಗೂ ಸ್ಟುಡಿಯೋ ಅದೇ ಸ್ಥಿತಿಯಲ್ಲಿದೆ. ಯಾವುದೇ ಅಭಿವೃದ್ಧಿ ಆಗಿಲ್ಲ.
ಬಾಲಕೃಷ್ಣ ಮೊಮ್ಮಗ ಕಾರ್ತಿಕ್, ಹೊಸ ಪ್ಲ್ಯಾನ್ ಹಾಕಿಕೊಂಡಿದ್ದರು. ಭೂಮಿಯನ್ನು ಮಾರಾಟ ಮಾಡಲು 1 ಎಕರೆಗೆ 14 ಕೋಟಿ ರೂ. ದರ ನಿಗದಿಪಡಿಸಿ ಪ್ರಕ್ರಿಯೆ ಶುರು ಮಾಡಿದ್ದರು ಎನ್ನಲಾಗುತ್ತಿದೆ. ಈ ವಿಷಯ ಅರಣ್ಯಾಧಿಕಾರಿಗಳಿಗೆ ತಲುಪಿದ ತಕ್ಷಣ, ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಷರತ್ತು ಉಲ್ಲಂಘನೆಯಾಗಿದೆ. ಆದ್ದರಿಂದ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು, ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಅಂತಾ ಶಿಫಾರಸು ಮಾಡಿದರು.
ಅಭಿಮಾನಿಗಳ ಆಕ್ರೋಶ ಒಂದೇ ಆಗಿದೆ. ಅಭಿಮಾನ್ ಸ್ಟುಡಿಯೋ ಜಮೀನು ಮಾರಾಟಕ್ಕೆ ಅಲ್ಲ, ಅದು ಕನ್ನಡ ಸಿನಿಮಾ ಇತಿಹಾಸ ಉಳಿಸೋ ಜಾಗ, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗೋ ಜಾಗ. ಈ ವಿವಾದಕ್ಕೆ ಯಾವ ತೀರ್ಪು ಬರುತ್ತದೆ? ಅಭಿಮಾನಿಗಳ ಕನಸು ನೆರವೇರುತ್ತದೆಯಾ? ಅಥವಾ ಕುಟುಂಬದ ಲಾಭಾಸಕ್ತಿ ಜಯವಾಗುತ್ತದೆಯಾ? ಇದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ