Thursday, December 4, 2025

Latest Posts

75 ಅಲ್ಲ ಈಗ 80 ವರ್ಷ- ಉಲ್ಟಾ ಹೊಡೆದ RSS ಮುಖ್ಯಸ್ಥ ಭಾಗವತ್

- Advertisement -

ಈ ಹಿಂದೆ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವೃತ್ತಿ ಬಗ್ಗೆ ಮಾತನಾಡಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ 75ನೇ ವಯಸ್ಸಿಗೆ ಕಾಲಿಟ್ಟ ನಂತರ ರಾಜಕೀಯದಿಂದ ಮೋದಿ ನಿವೃತ್ತರಾಗಲಿದ್ದಾರೆ ಎಂಬ ದಟ್ಟವಾದ ಊಹಾಪೋಹಗಳಿಗೆಲ್ಲಾ ಖುದ್ದು ಮೋಹನ್‌ ಭಾಗವತ್‌ ಅವರೇ ತೆರೆ ಎಳೆದಿದ್ದಾರೆ.

ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ 75 ವರ್ಷ ದಾಟಿದ ನಾಯಕರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮವಿದೆ ಎಂಬ ಚರ್ಚೆಗಳಿಗೆ ಅವರು ಪೂರ್ಣ ವಿರಾಮ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್ ಭಾಗವತ್, 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಹೇಳಿದ್ದಾರೆ. ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಸ್ವತಃ ಭಾಗವತ್ ಅವರು ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿಯವರಿಗಿಂತ ಆರು ದಿನ ಮುಂಚಿತವಾಗಿ 75ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.

ಸಂಘ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಸಂಘದ ಸ್ವಯಂಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ, ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನಾನು 80 ವರ್ಷವಾದರೂ ಸಂಘವನ್ನು ಮುನ್ನಡೆಸುತ್ತೇನೆ, ಎಂದು ಅವರು ಇದೇ ವೇಳೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 75ನೇ ವಯಸ್ಸಿನಲ್ಲಿ ನಿವೃತ್ತಿಯಾಗುತ್ತಾರೆ ಎಂಬ ವದಂತಿಯನ್ನು ಬಿಜೆಪಿ ಕೂಡ ಪದೇ ಪದೇ ನಿರಾಕರಿಸುತ್ತಲೇ ಬಂದಿದೆ. 75 ವರ್ಷದ ಮಿತಿ ಎಂಬ ನಿಯಮವೇ ಇಲ್ಲ ಎಂದು ಈಗಾಗಲೇ ಹಲವು ಬಾರಿ ಪಕ್ಷ ಸ್ಪಷ್ಟಪಡಿಸಿದೆ. ಇದಕ್ಕೆ ಉದಾಹರಣೆಯಾಗಿ, ಕೇಂದ್ರ ಸಚಿವ ಸಂಪುಟದಲ್ಲಿ 80 ವರ್ಷದ ಜಿತನ್ ರಾಮ್ ಮಾಂಝಿ ಅವರು ಸಚಿವರಾಗಿರುವುದನ್ನೂ ಬಿಜೆಪಿ ಉಲ್ಲೇಖಿಸಿದೆ.

ಕಳೆದ ವರ್ಷದ ಲೋಕಸಭಾ ಚುನಾವಣೆಯ ಮುಂಚೆಯೇ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಮಾತನಾಡಿದ್ದರು. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 17ರ ನಂತರವೂ ರಾಜಕೀಯದಲ್ಲಿ ಸಕ್ರಿಯವಾಗಿರುತ್ತಾರೆ ಮತ್ತು ನಿವೃತ್ತಿಯಾಗುವುದಿಲ್ಲ ಎಂದು ಅವರು ಆ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದರು. 75 ವರ್ಷ ದಾಟಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂಬುದು ಪಕ್ಷದ ಚುನಾವಣಾ ನಿರ್ಧಾರವೇ ಹೊರತು, ಬಿಜೆಪಿಯ ಸಂವಿಧಾನದಲ್ಲಿ ವಯಸ್ಸಿನ ಮಿತಿಯ ಬಗ್ಗೆ ಯಾವುದೇ ನಿಯಮವಿಲ್ಲ ಎಂದು ಅವರು ಹಿಂದೆಯೇ ತಿಳಿಸಿದ್ದರು.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss