ಧರ್ಮಸ್ಥಳ ಪ್ರಕರಣ ಮಹತ್ವದ ಘಟ್ಟ ತಲುಪಿದೆ. ನಿಗೂಢ ಸಾವುಗಳ ಪ್ರಕರಣದ ದಿಕ್ಕಲ್ಲಿ ತನಿಖೆ ಆರಂಭವಾಗಿತ್ತು. ಆದ್ರೀಗ ದೂರುದಾರರ ಬುಡಕ್ಕೆ ಬಂದು ನಿಂತಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ ತಪ್ಪು ಒಪ್ಪಿಕೊಳ್ಳುತ್ತಿದ್ದಂತೆ, ಪ್ರಕರಣ ಬೇರೆಯದ್ದೇ ತಿರುವು ಪಡೆದಿದೆ. ಚಿನ್ನಯ್ಯ ಎಲ್ಲೆಲ್ಲಿ ಓಡಾಡಿದ್ದ. ಯಾರನ್ನೆಲ್ಲಾ ಭೇಟಿಯಾಗಿದ್ದ. ಆತನ ಕೆಲಸಗಳಿಗೆ ಸಹಾಯ ಮಾಡಿದ್ಯಾರು?. ಹೋದಲ್ಲೆಲ್ಲಾ ಚಿನ್ನಯ್ಯನಿಗೆ ಆಶ್ರಯ, ಊಟ ಕೊಟ್ಟಿದ್ಯಾರು? ಹೀಗೆ ಪ್ರತಿಯೊಂದು ಆಂಗಲ್‌ನಲ್ಲೂ, ಎಸ್‌ಐಟಿ ತನಿಖೆ ಆರಂಭಿಸಿದೆ.
ಮಹೇಶ್ ಶೆಟ್ಟಿ ತಿಮರೋಡಿ ಬಳಿಕ, ಸಾಮಾಜಿಕ ಹೋರಾಟಗಾರ ಜಯಂತ್ ಮನೆಯಲ್ಲಿ ತಲಾಶ್ ಮಾಡಲಾಗಿದೆ. ಇಷ್ಟು ದಿನ ದೂರು ಕೊಡಲು ಅಧಿಕಾರಿಗಳ ಎದುರೇ ಬರ್ತಿದ್ದ ಜಯಂತ್, ಈಗ ತೆರೆಮರೆಯಲ್ಲಿ ನಿಂತು ಹೇಳಿಕೆಗಳನ್ನು ನೀಡುವಂತಾಗಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ಕೊಡುವಂತಾಗಿದೆ.
ದೂರು ನೀಡುವುದಕ್ಕೂ ಮುನ್ನ, ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನ ದೆಹಲಿಗೆ ಕರೆದುಕೊಂಡು ಹೋಗಿದ್ದೆವು. ಆ ವೇಳೆ ತಲೆಬುರುಡೆಯನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗಿದ್ದು ನಿಜ. ನಾವು ನಾಲ್ಕು ಜನರು ಕಾರಿನಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೋಗಿದ್ದೆವು. ನಾನು, ಚಿನ್ನಯ್ಯ, ಸುಜಾತಾ, ಮಟ್ಟಣ್ಣವರ್ ದೆಹಲಿಗೆ ಹೋಗಿದ್ದೆವು.
ಬಳಿಕ ದೆಹಲಿಯಿಂದ ಮಂಗಳೂರಿಗೆ ಬುರುಡೆ ತಂದಿದ್ದೇವೆ. ಒಂದು ವರ್ಷದ ಹಿಂದೆ ಚಿನ್ನಯ್ಯ ಜೊತೆಗೆ ಇದ್ದವರೆಲ್ಲಾ, ಓರ್ವ ಸ್ವಾಮೀಜಿಯನ್ನು ಭೇಟಿ ಆಗಿದ್ದಾರೆ. ಯಾವ ಮಠ, ಯಾವ ಸ್ವಾಮೀಜಿ ಎಂದು ಚಿನ್ನಯ್ಯ ಜತೆಗಿದ್ದವರೇ ಹೇಳಲಿ. ಈ ಪ್ರಕರಣದಲ್ಲಿ ನಾನು ಯಾವುದೇ ಶಿಕ್ಷೆಯನ್ನು ಅನುಭವಿಸಲು ಸಿದ್ಧ ಎಂದು, ದೂರುದಾರ ಜಯಂತ್ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾನೆ.