ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕಗಳನ್ನು ಹೆಚ್ಚಿಸುವ ಮೂಲಕ ಜಾಗತಿಕ ವ್ಯಾಪಾರದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸಂದರ್ಭದಲ್ಲಿ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಭೇಟಿಯನ್ನು ಕೈಗೊಂಡಿದ್ದಾರೆ. ಈ ಭೇಟಿಯನ್ನು ಇಡೀ ಜಗತ್ತು ಕಣ್ಣರಳಿಸಿ ನೋಡುವಂತಾಗಿದೆ.
ಜಪಾನ್ ಪ್ರವಾಸವನ್ನು ಮುಗಿಸಿ ಪ್ರಧಾನಿ ಮೋದಿ ನೇರವಾಗಿ ಚೀನಾಕ್ಕೆ ತಲುಪಿದ್ದಾರೆ. ಅಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಟಿಯಾಂಜಿನ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆ 2025ರಲ್ಲಿ ಅವರು ಭಾಗವಹಿಸಲಿದ್ದಾರೆ. ಇದು ಪ್ರಧಾನಮಂತ್ರಿ ಮೋದಿ ಅವರ 7 ವರ್ಷಗಳ ಬಳಿಕದ ಮೊದಲ ಚೀನಾ ಭೇಟಿ.
ಭಾರತವು 2017ರಿಂದ SCO ಸದಸ್ಯ ರಾಷ್ಟ್ರವಾಗಿದ್ದು, ಈ ವೇದಿಕೆಯಲ್ಲಿ ಭಯೋತ್ಪಾದನೆ, ಉಗ್ರವಾದ, ಆರ್ಥಿಕ ಸಹಕಾರ ಮತ್ತು ಪ್ರಾದೇಶಿಕ ಸ್ಥಿರತೆ ಎಂಬ ವಿಷಯಗಳನ್ನು ಚರ್ಚಿಸಲಾಗುತ್ತಿದೆ.
2020ರ ಆರಂಭದಲ್ಲಿ ಭಾರತ–ಚೀನಾ ಗಡಿಯಲ್ಲಿ ತೀವ್ರ ಘರ್ಷಣೆಗಳು ನಡೆದವು. ಆ ಬಳಿಕ, ಎರಡು ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಆದರೆ ಈಗ ಆ ಸಂಬಂಧಗಳು ಮತ್ತೆ ಸುಧಾರಿಸುತ್ತಿವೆ. ಈ ಹಿನ್ನೆಲೆಯಲ್ಲೇ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಆಹ್ವಾನವನ್ನು ಸ್ವೀಕರಿಸಿ ಮೋದಿ ಚೀನಾಕ್ಕೆ ಭೇಟಿ ನೀಡಿದ್ದಾರೆ.
ಶೃಂಗಸಭೆಯ ವೇಳೆ ಮೋದಿ ಜಿನ್ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನೂ ಭೇಟಿಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ದೊಡ್ಡ ಆರ್ಥಿಕ ಹೊಡೆತ ನೀಡಿದ್ದಾರೆ. ಅವರು ಭಾರತದ ಮೇಲೆ ಹೆಚ್ಚುವರಿಯಾಗಿ 25% ಸುಂಕ ವಿಧಿಸಿದ್ದು, ಒಟ್ಟು ತೆರಿಗೆ ಶೇಕಡ 50ಕ್ಕೆ ಏರಿದೆ. ಇದರ ಹಿಂದಿನ ಪ್ರಮುಖ ಕಾರಣ ಎಂದರೆ, ಭಾರತವು ಉಕ್ರೇನ್ ಯುದ್ಧದ ಮಧ್ಯೆಯೂ ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದು. ಇದರ ಬಗ್ಗೆ ಅಮೆರಿಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿತ್ತು.
SCO ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವನ್ನು ಪುನರುಚ್ಚರಿಸಲಿದ್ದಾರೆ. ಪಾಕಿಸ್ತಾನದ ಇತ್ತೀಚಿನ ಚಟುವಟಿಕೆಗಳ ಹಿನ್ನೆಲೆಯಲ್ಲಿಯೂ ಈ ಸಂದೇಶವು ಮಹತ್ವ ಪಡೆದಿದೆ. ಅಲ್ಲದೇ, ಭಾರತ–ಚೀನಾ ಸಂಬಂಧಗಳನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆಯೂ ಇದೆ. ಭಾನುವಾರ ಅವರು ಸ್ವಾಗತ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಮುಖ್ಯ ಶೃಂಗಸಭೆ ನಡೆಯಲಿದೆ. ಅದರ ಬಳಿಕ ಹಲವು ದ್ವಿಪಕ್ಷೀಯ ಮಾತುಕತೆಗಳೂ ನಡೆಯಲಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

