ಧರ್ಮಸ್ಥಳದ ಜೊತೆ ನಾವಿದ್ದೇವೆ ಅನ್ನೋ ಸಂದೇಶ ಸಾರಲು, ದೋಸ್ತಿ ಪಕ್ಷಗಳು ಶ್ರೀಕ್ಷೇತ್ರಕ್ಕೆ ಸಾಲು ಸಾಲು ಯಾತ್ರೆ ಕೈಗೊಳ್ಳುತ್ತಿದ್ದಾರೆ. ಧರ್ಮಸ್ಥಳ ಚಲೋ ಹೆಸರಲ್ಲಿ ಬಿಜೆಪಿ ಯಾತ್ರೆ ಮಾಡಿದ್ರೆ, ಸತ್ಯ ಯಾತ್ರೆ ಹೆಸರಲ್ಲಿ ಧರ್ಮಸ್ಥಳಕ್ಕೆ ಜೆಡಿಎಸ್ ನಿಯೋಗ ಎಂಟ್ರಿ ಕೊಟ್ಟಿತ್ತು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ, ಹಾಸನದಿಂದ ಯಾತ್ರೆ ಕೈಗೊಳ್ಳಲಾಗಿದೆ. ನಗರದ ಹೊರವಲಯದ ಕಂದಲಿಯಿಂದ ಧರ್ಮಸ್ಥಳಕ್ಕೆ ಹೊರಟಿದ್ದಾರೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಬಾಬು, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಹಾಸನ ಕ್ಷೇತ್ರದ ಸ್ವರೂಪ್ ಪ್ರಕಾಶ್ ಸೇರಿದಂತೆ ಹಲವು ನಾಯಕರು ಕೂಡ ಸಾಥ್ ಕೊಟ್ಟಿದ್ದಾರೆ. ಕಾರು, ಬಸ್‌ಗಳಲ್ಲಿ ಸಾವಿರಾರು ಕಾರ್ಯಕರ್ತರು, ಜಿಲ್ಲಾ ಮುಖಂಡರೊಂದಿಗೆ, ನಿಖಿಲ್ ಧರ್ಮಸ್ಥಳ ಯಾತ್ರೆ ಕೈಗೊಂಡಿದ್ರು.
ಸತ್ಯ ಯಾತ್ರೆಗೂ ಮನ್ನ ಹಾಸನದಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಧರ್ಮರಕ್ಷಣೆಗಾಗಿ ಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದ್ರು. ತರಾತುರಿಯಲ್ಲಿ ಸರ್ಕಾರಿ ಎಸ್‌ಐಟಿ ರಚನೆ ಮಾಡಿದೆ. ಕೆಲವರು ದುರುದ್ದೇಶದಿಂದ ದೂರು ಕೊಟ್ಟಿದ್ದಾರೆ. ವ್ಯವಸ್ಥಿತ ಸಂಚು ನಡೆದಿದೆ. ರಾಜ್ಯ ಸರ್ಕಾರ ಪ್ರಾಥಮಿಕ ತನಿಖೆ ಮಾಡಿಸಿಲ್ಲ. ಮಂಜುನಾಥಸ್ವಾಮಿಗೆ ಸರ್ಕಾರ ಅಗೌರವ ತೋರಿಸಿದೆ.
ಇದರ ಹಿಂದಿನ ಸಮಾಜಘಾತುಕ ಶಕ್ತಿಗಳನ್ನು, ಹೊರಗೆಳೆಯುವ ಕೆಲಸ ಮಾಡಬೇಕಿದೆ. ನಮ್ಮ ಧರ್ಮವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮಂಜುನಾಥಸ್ವಾಮಿ, ಅಣ್ಣಪ್ಪ ಸ್ವಾಮಿಯ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ಧರ್ಮಾಧಿಕಾರಿಗಳು, ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸುತ್ತೇವೆ. ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕೆಂದು, ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಧರ್ಮಸ್ಥಳ ತಲುಪಿದ ಜೆಡಿಎಸ್ ನಿಯೋಗಕ್ಕೆ, ಅದ್ಧೂರಿಯಾಗಿ ಸ್ವಾಗತ ಕೋರಲಾಯ್ತು. ಮೊದಲು ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿದ್ರು. ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ, ನಿಖಿಲ್ ಕುಮಾರಸ್ವಾಮಿ ಆಶೀರ್ವಾದ ಪಡೆದಿದ್ದಾರೆ.
ಇನ್ನು, ಧರ್ಮಸ್ಥಳದಲ್ಲೇ ಜೆಡಿಎಸ್ ಕಾರ್ಯಕ್ರಮ ನಡೆದಿದ್ದು, ವೀರೇಂದ್ರ ಹೆಗ್ಗಡೆಯವರು ಕೂಡ ಭಾಗಿಯಾಗಿದ್ರು.