ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕುಣಿದು ಕುಪ್ಪಳಿಸುತ್ತಾ ಗಣೇಶ ಮೂರ್ತಿಗಳ ವಿಸರ್ಜನೆ ಹೋದವರು, ಬಾರದ ಲೋಕಕ್ಕೆ ಹೋಗಿದ್ದಾರೆ.
ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ , ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಇಬ್ಬರು ಮೃತಪಟ್ಟಿದ್ದಾರೆ. ಇತ್ತ, ಮೈಸೂರಿನಲ್ಲೂ ಗಣಪನಿಗೆ ಪೂಜೆ ಸಲ್ಲಿಸಲು ಹೋಗಿ, ಟ್ರ್ಯಾಕ್ಟರ್‌ನಿಂದ ಬಿದ್ದು ವ್ಯಕ್ತಿಯೊಬ್ರು ಸಾವನ್ನಪ್ಪಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ, ಗಣಪತಿ ವಿಸರ್ಜನಾ ಮೆರವಣಿಗೆ ನಡೀತಿತ್ತು. ಈ ವೇಳೆ ಯುವಕರ ಜೊತೆ ಡಿಜೆ ಹಾಡಿಗೆ ಮಂಜುನಾಥ್ ಭರ್ಜರಿ ಸ್ಟೆಪ್ಸ್ ಹಾಕುತ್ತಿದ್ದರು. ಡ್ಯಾನ್ಸ್ ಮಾಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್ ಆಗಿದ್ದು, ಕುಸಿದು ಬಿದ್ದಿದ್ರು.
ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲೂ, ಇಂಥದ್ದೇ ಘಟನೆ ನಡೆದಿದೆ. ಗಣೇಶ ವಿಸರ್ಜನೆ ವೇಳೆ ನಾಗವಲ್ಲಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡುತ್ತಿದ್ದ ಲಕ್ಷ್ಮಿಪತಿಗೆ, ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ 40 ವರ್ಷದ ಲಕ್ಷ್ಮಿಪತಿ, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಗಣೇಶ ಮೆರವಣಿಗೆ ವೇಳೆ ಟ್ರ್ಯಾಕ್ಟರ್‌ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ. 34 ವರ್ಷದ ಆಟೋ ರಾಜು, ಮನೆ ಬಳಿ ಬಂದ ಗಣಪನಿಗೆ ಪೂಜೆ ಸಲ್ಲಿಸಲು ಟ್ರ್ಯಾಕ್ಟರ್ ಹತ್ತಿದ್ರು. ಪೂಜೆ ಸಲ್ಲಿಸುತ್ತಾ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

