ಅವರಿವರ ಮಾತು ಕೇಳಿಕೊಂಡು ಬದುಕೋ ನಿಮಗೆ ಅಷ್ಟು attitude ಇರಬೇಕಾದ್ರೆ, ನಾನು, ನಂದು, ನನ್ನ ಮಾತು ಅಂತೀರೋ ನಂಗೆ ಎಷ್ಟಿರಬಾರ್ದು ಅಂದೋಳ ಕಥೆ ಊಹೆ ಮಾಡಿಕೊಳ್ಳೋಕೆ ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದೆ.
ನೋಡಿ ಇತ್ತೀಚಿನ ದಿನಗಳಲ್ಲಿ ಹುಡುಗರಿಗೆ ಮದುವೆಯಾಗೋಕೆ ಹೆಣ್ಣು ಮಕ್ಕಳೇ ಸಿಗ್ತಯಿಲ್ಲಾ. ಆದ್ರೆ ಇಲ್ಲೊಬ್ಬ ಭೂಪ ತನಗೆ ವಯಸ್ಸು 52 ಆದ್ರೂ ಕೂಡ 26 ವರ್ಷದ ಯುವತಿ ಜೊತೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ. ಆದ್ರೆ ಸಂಬಂಧ ಮುರಿದುಕೊಂಡ ಯುವತಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಭೀಕರ ಹತ್ಯೆ ಮಾಡಿದ್ದಾನೆ.
ಹೌದು 52 ವರ್ಷದ ಕ್ಯಾಬ್ ಚಾಲಕ ವಿಠ್ಠಲ ಎಂಬಾತನು ತನ್ನ 26 ವರ್ಷದ ವಿಧವೆ ಪ್ರೇಯಸಿಯನ್ನು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ವ್ಯಕ್ತಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಸದ್ಯ 26 ವರ್ಷದ ವನಜಾಕ್ಷಿ ಎಂಬ ಯುವತಿಯ ಜೊತೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ.
ವೃದ್ಧ ವಯಸ್ಸಿನ ವಿಠ್ಠಲ ಹಾಗೂ ಯುವತಿ ವನಜಾಕ್ಷಿ ಕಳೆದ ಮೂರು ನಾಲ್ಕು ವರ್ಷಗಳಿಂದ ಆನೇಕಲ್ ಬಳಿಯ ಮಳೆನಲ್ಲಸಂದ್ರ ಗ್ರಾಮದಲ್ಲಿ ಲಿವಿಂಗ್ ಟುಗೆದರ್ ನಲ್ಲಿದ್ರು. ಇವರ ನಡುವೆ ಸೌಹಾರ್ದತೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವನಜಾಕ್ಷಿ ಬೇರೆ ರೀತಿಯ ವರ್ತನೆ ತೋರಿದ್ದು, ಅದೇ ಗ್ರಾಮದಲ್ಲಿನ ಮತ್ತೊಬ್ಬ ಯುವಕರೊಂದಿಗೆ ಸಲುಗೆ ಬೆಳೆಸಿದ್ದಳು ಎನ್ನಲಾಗಿದೆ.
ಈ ವಿಷಯದಿಂದ ವಿಠ್ಠಲ ಬೇಸತ್ತು ಹೋಗಿದ್ರು. ವಿಠ್ಠಲ ಮತ್ತು ವನಜಾಕ್ಷಿಯ ನಡುವೆ ತೀವ್ರ ಜಗಳ ನಡೆಯುತ್ತಿತ್ತು. ಕೊನೆಗೆ ಆಗಸ್ಟ್ 30 ರಂದು ವನಜಾಕ್ಷಿ ಬನ್ನೇರುಘಟ್ಟದಿಂದ ಬಸವನಪುರಕ್ಕೆ ತನ್ನ ಹೊಸ ಸ್ನೇಹಿತನೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಹೋಗ್ತಾಯಿದ್ದಳು. ಈ ವೇಳೆ, ವಿಠ್ಠಲ ಅವರಿಬ್ಬರನ್ನ ಹಿಂಬಾಲಿಸಿ, ಕಾರನ್ನು ಅಡ್ಡಗಟ್ಟಿ, 5 ಲೀಟರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ.
ಆದ್ರೆ ವನಜಾಕ್ಷಿ ಮತ್ತು ಆಕೆಯ ಸ್ನೇಹಿತ ಕಾರಿನಿಂದ ಓಡಿ ಹೋದರು. ವಿಠ್ಠಲ, ವನಜಾಕ್ಷಿಯನ್ನ ಹಿಂಬಾಲಿಸಿ ಆಕೆಯ ಮೇಲೆ ಪೆಟ್ರೋಲ್ ಎರಚಿ ಲೈಟರ್ ಮೂಲಕ ಬೆಂಕಿ ಹಚ್ಚಿದ್ದಾನೆ. ಶೇಕಡಾ 60 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವನಜಾಕ್ಷಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ.
ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದ ವಿಠ್ಠಲನಿಗೆ ಈಗಾಗಲೇ ಎರಡು ಮದುವೆಯಾಗಿತ್ತು. ಮೊದಲ ಪತ್ನಿ ಮೃತಪಟ್ಟಿದ್ದು, ಎರಡನೇ ಪತ್ನಿ ಬೇರೊಬ್ಬರೊಂದಿಗೆ ಪರಾರಿಯಾಗಿದ್ದಳು. ಈ ಮಧ್ಯೆ ವಿಠ್ಠಲ ವನಜಾಕ್ಷಿ ಜೊತೆ ಸಂಬಂಧ ಬೆಳೆಸಿದ್ದ. ಆದರೆ ಆ ಸಂಬಂಧ ಕೊನೆಗೆ ಹಿಂಸಾತ್ಮಕ ಕೊಲೆಯೊಂದಿಗೆ ಅಂತ್ಯ ಕಂಡಿದೆ. ಇನ್ನು ಬೆಂಗಳೂರಿನ ಆನೇಕಲ್ ಸಮೀಪ ಈ ಭೀಕರ ಕೊಲೆ ನಡೆದಿದೆ. ಈ ಕುರಿತು ಹುಳಿಮಾವು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವಿಠ್ಠಲನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ವರದಿ : ಲಾವಣ್ಯ ಅನಿಗೋಳ