ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಇತರೆ ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಕರಾವಳಿ ಭಾಗಗಳಲ್ಲಿ ಸೆಪ್ಟೆಂಬರ್ 2 ಮತ್ತು 3ರಂದು ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಈ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಸಮುದ್ರ ತೀರ ಪ್ರದೇಶಗಳಿಗೆ ಹೋಗದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಇದರ ನಡುವೆ ಬೆಂಗಳೂರಿನಲ್ಲಿಯೂ ಸಹ ಭಾರೀ ಮಳೆ ಬರುವ ಸಾಧ್ಯತೆ ಇದೆ. ಸೆಪ್ಟೆಂಬರ್ 1ರ ಸಂಜೆ ವರುಣ ಆರ್ಭಟ ಶುರುವಾಗಿದೆ. ಇಂದೂ ಕೂಡ ಭಾರೀ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮೂಲಕ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸೆಪ್ಟೆಂಬರ್ 1ರಿಂದ 5ರವರೆಗೆ ಕರಾವಳಿ ಭಾಗಗಳಲ್ಲಿ ಗಾಳಿಯ ವೇಗವೂ ಹೆಚ್ಚಿರಲಿದೆ. ಗಾಳಿಯ ವೇಗ ಗಂಟೆಗೆ 40 ರಿಂದ 60 ಕಿ.ಮೀ ಇರಲಿದೆ. ಗಾಳಿ, ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮೀನುಗಾರರು ಮತ್ತು ತೀರ ಪ್ರದೇಶ ನಿವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಚೆನ್ನೈನ ಮನಾಲಿಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಮೋಡ ಮುಸುಕಿದ ವಾತಾವರಣವಿದ್ದು, ಸಂಜೆ ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಇಂದಿನ ಗರಿಷ್ಠ ತಾಪಮಾನ 27°C, ಕನಿಷ್ಠ ತಾಪಮಾನ 21°C ಇರಲಿದೆ.

