ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ವಜಾಗೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ರಾಜಣ್ಣ, ಈಗ ದೆಹಲಿಯ ಜಂತರ್ ಮಂತರ್‌ನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ವಾಲ್ಮೀಕಿ ಸಮುದಾಯದವರನ್ನು ಒಟ್ಟುಗೂಡಿಸಿ ದೆಹಲಿಯಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ನಡೆಸಲು ತೀರ್ಮಾನಿಸಿದ್ದಾರೆ. ಜೊತೆಗೆ ಎರಡು ವಿಶೇಷ ರೈಲಿಗಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮತಗಳ್ಳತನ ಆರೋಪಕ್ಕೆ ಸಂಬಂಧಿಸಿ ತನಗೆ ನೋಟಿಸ್ ನೀಡದೆ, ವಿವರಣೆ ಕೇಳದೆ ಸಚಿವ ಸಂಪುಟದಿಂದ ವಜಾ ಮಾಡಿದ್ದಾರೆ. ಈ ಕ್ರಮದಿಂದ ಬೇಸರಗೊಂಡಿರುವ ರಾಜಣ್ಣ, ‘ಒಬ್ಬರಿಗೆ ಒಂದು ನೀತಿ, ಮತ್ತೊಬ್ಬರಿಗೆ ಬೇರೊಂದು ನೀತಿ’ ಎಂಬ ತೀವ್ರ ವಾಗ್ದಾಳಿ ನಡೆಸಲು ಸಿದ್ಧರಾಗಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಶಕ್ತಿ ಪ್ರದರ್ಶನಕ್ಕೆ ರಾಜ್ಯದಿಂದ ಬೆಂಬಲಿಗರನ್ನು ಕರೆದೊಯ್ಯಲು 2 ವಿಶೇಷ ರೈಲುಗಳ ವ್ಯವಸ್ಥೆಗಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ರಾಜಣ್ಣ ಮನವಿ ಸಲ್ಲಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಸುಮಾರು 10,000 ಜನರನ್ನು ಕರೆದೊಯ್ಯುವ ಉದ್ದೇಶವಿದ್ದು, ಈಗಾಗಲೇ 7,000ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದಾರೆ ಎನ್ನಲಾಗಿದೆ.
ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಸೇರಿ 15ಕ್ಕೂ ಹೆಚ್ಚು ಮಠಾಧೀಶರು ರಾಜಣ್ಣ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸಮುದಾಯಕ್ಕೆ ನಡೆದ ಅನ್ಯಾಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಣ್ಣ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಮತ್ತೆ ಯಾವುದೇ ಅಧಿಕಾರ ಬೇಕಾಗಿಲ್ಲ, ಐಶ್ವರ್ಯವೂ ಬೇಡ. ಜನರ ಪ್ರೀತಿ ಮತ್ತು ವಿಶ್ವಾಸ ಸಾಕು. ನನಗೆ ‘ರಾಜಣ್ಣ’ ಎಂಬ ಹೆಸರು ದೊರೆತದ್ದು ಕ್ಯಾತ್ಸಂದ್ರ ಜನರಿಂದ. ಅವರ ಆಶೀರ್ವಾದದಿಂದ ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ನಾನು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ರಾಜಣ್ಣ ಭಾವುಕರಾಗಿ ಮಾತನಾಡಿದ್ದಾರೆ.
ಸಂಘ ಪರಿವಾರದ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಕೆಲ ನಾಯಕರಿಗೆ ಎಐಸಿಸಿ ಮೃದು ಧೋರಣೆ ತೋರಬಾರದು. ಹಾಗೊಂದುವೇಳೆ ತೋರಿದರೆ ತನ್ನಂತಹ ನಾಯಕರಿಗೆ ಅಂತಹ ಅವಕಾಶ ನೀಡದೇ ತಕ್ಷಣವೇ ಕ್ರಮ ವಹಿಸಲಾಗಿದೆ ಎಂಬ ಅಸಮಾಧಾನ ರಾಜಣ್ಣರದು. ತಾವು ಪ್ರತಿನಿಧಿಸಿರುವ ಮಧುಗಿರಿ ಮತ್ತು ಯಮಕನಮರಡಿ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾದರೂ, ಕಾಂಗ್ರೆಸ್ ಗೆದ್ದಿದ್ದು ವಾಲ್ಮೀಕಿ ಸಮುದಾಯದ ಬೆಂಬಲದಿಂದ ಎನ್ನುವುದು ಅವರ ವಾದವಾಗಿದೆ.
ರಾಜಣ್ಣ ಅವರ ಈ ಹೋರಾಟಕ್ಕೆ ಪಕ್ಷದೊಳಗಿನ ಕೆಲವರು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಮಾಹಿತಿ ಹಬ್ಬಿದೆ. ಅವರು ಮುಂದಿನ ದಿನಗಳಲ್ಲಿ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಬಹುದೆಂಬ ನಿರೀಕ್ಷೆ ಇದೆ.