ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೆ ವಿದೇಶಗಳಿಂದ ಹಣ ಬಂದಿದೆ ಅನ್ನೋ ಆರೋಪ ಸಂಚಲನ ಸೃಷ್ಟಿಸಿದೆ. ಹೀಗಾಗಿ ಧರ್ಮಸ್ಥಳ ಪ್ರಕರಣದ ತನಿಖೆಗೆ ಎನ್‌ಐಎ ಅಖಾಡಕ್ಕೆ ಇಳಿಯಲೇ ಬೇಕೆಂಬ ಕೂಗು ಜೋರಾಗ್ತಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ಎನ್‌ಐಎ ತನಿಖೆ ಮಾಡಿಸಲು ಬಿಜೆಪಿಗರು ಪ್ಲಾನ್ ಮಾಡ್ತಿದ್ದಾರೆ. ಇದರ ಜೊತೆಗೆ ಕೇಂದ್ರ ಮಟ್ಟದಲ್ಲಿ ಪ್ರಭಾವ ಬಳಸಲು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಕೈಗೊಂಡಿದ್ದರು. ಈ ವೇಳೆ ಧರ್ಮಾಧಿಕಾರಿಗಳ ಜೊತೆ ಹೆಚ್.ಡಿ ಕುಮಾರಸ್ವಾಮಿ ಅವರು ಫೋನ್‌ನಲ್ಲಿ ಮಾತನಾಡಿದ್ದರು. ಇದರ ಜೊತೆಗೆ ಧರ್ಮಸ್ಥಳ ವಿಚಾರದಲ್ಲಿ ಆರ್‌ಎಸ್‌ಎಸ್, ಬಿಜೆಪಿ ನಾಯಕರ ಜೊತೆಗೂ ಹೆಚ್‌ಡಿಕೆ ಚರ್ಚೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ದಾಖಲೆಗಳ ಸಮೇತ ಎರಡ್ಮೂರು ದಿನಗಳಲ್ಲಿ ಹೆಚ್‌ಡಿಕೆ, ಅಮಿತ್ ಶಾ ಭೇಟಿಯಾಗುವ ಸಾಧ್ಯತೆ ಇದೆ. ಈಗಾಗಲೇ ಬುರುಡೆ ಕೇಸ್‌ಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಸಾಕಷ್ಟು ಮಾಹಿತಿ, ದಾಖಲೆಗಳನ್ನು ಕಲೆ ಹಾಕಲಾಗಿದೆ.
ಸೆಪ್ಟೆಂಬರ್ 2ರಂದು ಧರ್ಮಸ್ಥಳ ಪ್ರಕರಣಕ್ಕೆ ಇಡಿ ಸಡನ್ ಎಂಟ್ರಿ ಕೊಟ್ಟಿದೆ. ವಿದೇಶಿ NGOಗಳಿಂದ ಹಣ ಫಂಡಿಂಗ್ ಅನುಮಾನ ಹಿನ್ನೆಲೆ, ಒಡನಾಡಿ ಹಾಗೂ ಸಂವಾದ ಸಂಸ್ಥೆಗಳ ಅಕೌಂಟ್ ಗಳ ಬಗ್ಗೆ ಇಡಿ ಮಾಹಿತಿ ಸಂಗ್ರಹ ಮಾಡುವ ಕೆಲಸ ಆರಂಭಿಸಿದೆ. ಹೀಗಾಗಿ ಕೆಲ ಅಕೌಂಟ್ ಗಳ ಮಾಹಿತಿ ನೀಡುವಂತೆ ಬ್ಯಾಂಕ್‌ಗಳಿಗೆ, ಪತ್ರದ ಮೂಲಕ ಮನವಿ ಮಾಡಿದೆ. ಫೆಮಾ ಮತ್ತು ಫೆರಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತೇಜಸ್ ಎ ಗೌಡ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಶುರುವಾಗಿದೆ.
ಇದೀಗ ಇಡಿ ಬಳಿಕ ಎನ್‌ಐಎ ಅಖಾಡಕ್ಕೆ ಇಳಿಸಲು, ತೆರೆಮರೆಯಲ್ಲಿ ದೋಸ್ತಿ ಪಕ್ಷಗಳು ಸಿದ್ಧತೆ ಮಾಡಿಕೊಳ್ತಿವೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲೇಬೇಕೆಂದು ನಿರ್ಧರಿಸಿ, ಹೆಚ್.ಡಿ ಕುಮಾರಸ್ವಾಮಿಯವರು ತಾವೇ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.