ಬೆಳಗಾವಿ ಜಿಲ್ಲೆ ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು, ಪ್ರತಿಷ್ಠಿತ ಕುಟುಂಬಗಳ ಕಾಳಗ ಶುರುವಾಗಿದೆ. ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಇನ್ನೆರಡು ತಿಂಗಳಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದೆ. ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧಿಕಾರಕ್ಕಾಗಿ ನೇರ ಹಣಾಹಣಿ ಶುರುವಾಗ್ತಿದೆ.
ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿ ಬದುಕಿದ್ದಾಗ, ಎಲ್ಲಾ ಚುನಾವಣೆಗಳಲ್ಲೂ ಸಂಧಾನದ ಮೊರೆ ಹೋಗಲಾಗ್ತಿತು. ಪರಸ್ಪರ ಒಪ್ಪಂದ ಮಾಡಿಕೊಂಡು, ಅವಿರೋಧವಾಗಿ ತಮ್ಮವರನ್ನು ಆಯ್ಕೆ ಮಾಡಿಕೊಳ್ತಿದ್ರು. 2022ರಲ್ಲಿ ಉಮೇಶ್ ಕತ್ತಿ ನಿಧನದ ಬಳಿಕ, ಬೆಳಗಾವಿ ರಾಜಕೀಯದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿ, ಜಾರಕಿಹೊಳಿ ಬ್ರದರ್ಸ್ ರಣತಂತ್ರ ಹೆಣೆಯುತ್ತಿದ್ದಾರೆ.
ರಾಜಕೀಯ ಕ್ಷೇತ್ರದ ಜೊತೆಗೆ ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು, ಕತ್ತಿ ಕುಟುಂಬ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಬ್ಯುಸಿಯಾಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಏಕಕಾಲಕ್ಕೆ ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಕೆಲವು ತಿಂಗಳಿಂದ ಬೆಳಗಾವಿಯಲ್ಲೇ ಠಿಕಾಣಿ ಹೂಡಿದ್ದಾರೆ.
ಈಗಾಗಲೇ ಬೆಂಬಲಿಗರ ಜೊತೆ ಹುಕ್ಕೇರಿಯಾದ್ಯಂತ ಸಂಚಾರ ಆರಂಭಿಸಿದ್ದಾರೆ. ಪ್ರತಿಯೊಂದು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ, ಗ್ರೌಂಡ್ ವರ್ಕ್ ಆರಂಭಿಸಲಾಗಿದೆ. ಆದರೆ ಕತ್ತಿ ಕ್ಷೇತ್ರ ಹುಕ್ಕೇರಿ ಕೋಟೆಗೆ ಎಂಟ್ರಿ ಕೊಟ್ಟ ಜಾರಕಿಹೊಳಿ ಬ್ರದರ್ಸ್, ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಆದರೆ, ಕತ್ತಿ ಕುಟುಂಬ ಮತ್ತು ಎ.ಬಿ. ಪಾಟೀಲ್‌ಗೆ ಬೆಂಬಲ ಸೂಚಿಸುವುದಾಗಿ, ಹಲವು ಗ್ರಾಮಗಳಲ್ಲಿ ಪ್ರತಿಜ್ಞೆ ಮಾಡಿದ್ದಾರೆ. ಇದು ಜಾರಕಿಹೊಳಿ ಬ್ರದರ್ಸ್‌ಗೆ ನುಂಗಲಾರದ ತುತ್ತಾಗಿದೆ. ಆದರೂ, ಶತಾಯಗತಾಯ ಬೆಳಗಾವಿ ಮೇಲೆ ಪ್ರಾಬಲ್ಯ ಸಾಧಿಸೋಕೆ ರಣತಂತ್ರ ರೂಪಿಸುತ್ತಿದ್ದಾರೆ.

