ಧರ್ಮಸ್ಥಳ ಪ್ರಕರಣದಲ್ಲಿ ಪ್ರಾರಂಭದಿಂದಲೂ ಮೌನವಹಿಸಿದ್ದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಬಿಜೆಪಿ ನಿಯೋಗದ ಭೇಟಿ ಬಳಿಕ ಮೌನಮುರಿದಿದ್ರು. ಮೊದಲ ಬಾರಿಗೆ ಬಹಿರಂಗವಾಗಿ ತಮಗಾಗುತ್ತಿರುವ ಅಸಮಾಧಾನ, ನೋವುಗಳ ಬಗ್ಗೆ ಮಾತನಾಡಿದ್ರು. ತಮ್ಮ ಮತ್ತು ಕುಟುಂಬದವರ ಮೇಲಿನ ಆರೋಪಗಳೆಲ್ಲಾ ಆಧಾರ ರಹಿತ ಅಂತಾ ಹೇಳಿದ್ರು. ಈಗ ಮತ್ತೊಮ್ಮೆ, ಧರ್ಮಸ್ಥಳದಲ್ಲಿ ನಡೆದ ಧರ್ಮ ಜಾಗೃತಿ ಸಮಾವೇಶದಲ್ಲಿ, ವೀರೇಂದ್ರ ಹೆಗ್ಗಡೆಯವರು ಮನಬಿಚ್ಚಿ ಮಾತನಾಡಿದ್ದಾರೆ.
ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ ಮತ್ತು ಅಣ್ಣಪ್ಪಸ್ವಾಮಿ ರಕ್ಷಣೆಯಿಂದ, ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿವೆ. ಸತ್ಯದ ಸಾಕ್ಷಾತ್ಕಾರವಾಗುತ್ತಿದೆ. ಶಾಂತಿ, ನೆಮ್ಮದಿಯೂ ದೊರಕಿದೆ. ನಾನು ಧರ್ಮಾಧಿಕಾರಿಯಾಗಿ ‘ಹೆಗ್ಗಡೆ’ ಪೀಠವನ್ನು ಬಯಸಿದವನಲ್ಲ. ಆದರೆ, ಅನಿರೀಕ್ಷಿತವಾಗಿ ತೀರ್ಥರೂಪರ ನಿಧನದಿಂದ, ನಾನು ಆ ಪಟ್ಟವನ್ನು ಸ್ವೀಕರಿಸಬೇಕಾಯಿತು.

ಇಲ್ಲಿ ನಾನು ನೆಪ ಮಾತ್ರ. ಪ್ರತೀ ಸಂಕ್ರಮಣದ ದಿನ ನಾನು ಧರ್ಮದೇವತೆಗಳಿಗೆ ವರದಿ ಒಪ್ಪಿಸಬೇಕು. ಆಗ ಅವರು, ತಿಳುವಳಿಕೆ ಇಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇದೆ. ಏನೇ ಆಪತ್ತು, ವಿಪತ್ತು ಬಂದರೂ ಹೆತ್ತ ತಾಯಿಯಂತೆ ನಾವು ರಕ್ಷಣೆ ನೀಡುತ್ತೇವೆ ಎಂದು ಅಭಯ ನೀಡುತ್ತಾರೆ. ಏನಾದರೂ ತಪ್ಪಾದರೆ ಕೈಯ ಎಣ್ಣೆ ಕಣ್ಣಿಗೆ ತಾಗಿದಂತೆ ಆಗಬಹುದು ಎಂದು, ಎಚ್ಚರಿಕೆಯನ್ನೂ ನೀಡುತ್ತಾರೆ.
ಧರ್ಮಾಧಿಕಾರಿಯಾಗಿ ನನ್ನ ಪಟ್ಟಾಭಿಷೇಕ ಆದಾಗ, ಆರಂಭದಲ್ಲಿಯೂ ಅನೇಕ ಪ್ರತಿಭಟನೆ, ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಕುಟುಂಬದ ಎಲ್ಲಾ ಸದಸ್ಯರ ಸಹಕಾರ, ನೌಕರ ವೃಂದದವರ ಕರ್ತವ್ಯ ನಿಷ್ಠೆ ಹಾಗೂ ಊರಿನ ನಾಗರಿಕರು ಮತ್ತು ಕ್ಷೇತ್ರದ ಅಭಿಮಾನಿಗಳ ಸಹಕಾರದಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ. ಚತುರ್ದಾನ ಪರಂಪರೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಚಿತ ಸಾಮೂಹಿಕ ವಿವಾಹ, ಮದ್ಯವರ್ಜನ ಶಿಬಿರ, ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳು ಸೇರಿದಂತೆ, ಹತ್ತು-ಹಲವು ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಯಿತು. ಇತರ ಊರುಗಳಲ್ಲಿರುವ ಎಲ್ಲಾ ತೀರ್ಥಕ್ಷೇತ್ರಗಳು ಕೂಡ ಪವಿತ್ರವಾಗಿದ್ದು, ನಿಮ್ಮ ಊರಿನ ಕ್ಷೇತ್ರವನ್ನು, ಅಲ್ಲಿನ ಸಂಪ್ರದಾಯ ಪರಂಪರೆಯ ರಕ್ಷಣೆಯೊಂದಿಗೆ ಪಾವಿತ್ರ್ಯತೆ ಮತ್ತು ಸ್ವಚ್ಛತೆಯನ್ನೂ ಕಾಪಾಡಬೇಕಿದೆ.
ನಾನು ‘ಹೆಗ್ಗಡೆ’ಯಾಗಿ ಬಂದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದಿರುವೆ. ಎಲ್ಲರ ಮುಖದಲ್ಲಿ ಮಂದಹಾಸ ಕಂಡು ನನಗೂ ಸಂತೋಷವಾಗಿದೆ. ತೃಪ್ತಿ ಮತ್ತು ನೆಮ್ಮದಿ ದೊರಕಿದೆ ಅಂತಾ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹೇಳಿದ್ರು.

