ಧರ್ಮಸ್ಥಳದ ವಿರುದ್ಧ ಕಳೆದ 1 ವರ್ಷದಿಂದ, ವ್ಯವಸ್ಥಿತ ಪಿತೂರಿ ನಡೆಸಲಾಗಿತ್ತಂತೆ. 2024ರ ಡಿಸೆಂಬರ್ 24ರಂದು ಕೊಡಗಿಗೆ ಟಿ.ಜಯಂತ್ ತಂಡ ಬಂದಿತ್ತಂತೆ. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುರುಡೆ ಗ್ಯಾಂಗ್ ಓಡಾಡಿದೆ. ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಕಟ್ಟಲಾಗದೆ, ಸಮಸ್ಯೆಗೆ ಸಿಲುಕಿದ್ದ ಮಹಿಳೆಯರನ್ನು ಭೇಟಿಯಾಗಿ ಪ್ರತ್ಯೇಕ ಸಭೆ ನಡೆಸಲಾಗಿದೆ. ಆ ಮಹಿಳೆಯರನ್ನು ಬಳಸಿಕೊಂಡು ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ ಎನ್ನಲಾಗ್ತಿದೆ.
ವಿರಾಜಪೇಟೆಯ ನೆಹರು ನಗರದ ನಿವಾಸಿ ಗೀತಾ ಎಂಬಾಕೆಯನ್ನು ಸಂಪರ್ಕಿಸಲಾಗಿತ್ತಂತೆ. ವೀರೇಂದ್ರ ಹೆಗ್ಗಡೆಯವರ ಹೆಸರು ಸೇರಿಸಿ, ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದಾರೆ. ಮಹಿಳೆ ಮಾತನಾಡಿರುವ ವಿಡಿಯೋವನ್ನು ಎಡಿಟ್ ಮಾಡಿ, ಬೇರೆ ಬೇರೆ ಫೈನಾನ್ಸ್‌ಗಳ ಹೆಸರು ಬಿಟ್ಟು, ಧರ್ಮಸ್ಥಳ ಸಂಘದ ಹೆಸರನ್ನು ಮಾತ್ರವೇ ಉಳಿಸಿಕೊಳ್ಳಲಾಗಿದೆ. ಧರ್ಮಸ್ಥಳ ಸಂಘದಿಂದಲೇ ಕಿರುಕುಳ ಆಗಿದೆ ಎನ್ನುವಂತೆ, ಖುದ್ದು ಜಯಂತ್ ತಂಡವೇ ಮುಂದೆ, ನಿಂತು ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ಕೊಡಲಾಗಿದೆ.
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೋ ನೋಡಿ ಗೀತಾ ಶಾಕ್ ಆಗಿದ್ರು. ತಕ್ಷಣವೇ ಜನಜಾಗೃತಿ ಸಂಘಟನೆ ಮುಖಂಡರನ್ನು ಭೇಟಿಯಾಗಿ ನಡೆದ ವಿಷಯ ತಿಳಿಸಿದ್ರಂತೆ. ಬಳಿಕ ಈ ಕುರಿತು ತನಿಖೆ ಮಾಡಬೇಕೆಂದು, ಕೊಡಗು ಎಸ್‌ಪಿಗೆ ದೂರು ನೀಡಿದ್ದಾರೆ.
ನಾನು ಸಮಸ್ಯೆಗೆ ಸಿಲುಕಿರುವುದನ್ನು ಬಳಸಿಕೊಂಡು ಜಯಂತ್ ಮತ್ತು ಟೀಂ ದುರ್ಬಳಕೆ ಮಾಡಿಕೊಂಡಿದೆ. ಧರ್ಮಸ್ಥಳ ಸಂಘದ ವಿರುದ್ಧವಾಗಲಿ ಅಥವಾ ವೀರೇಂದ್ರ ಹೆಗ್ಗಡೆ ಅವರ ವಿರುದ್ಧವಾಗಲಿ ನಾನೇನೂ ದೂರು ಕೊಟ್ಟಿರಲಿಲ್ಲ. ಹೀಗಂತ ಮತ್ತೊಂದು ವಿಡಿಯೋ ಮೂಲಕ ಗೀತಾ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು, ಜನಜಾಗೃತಿ ವೇದಿಕೆ ಸದಸ್ಯ ಚಂದ್ರಮೋಹನ್ ಪ್ರತಿಕ್ರಿಯಿಸಿದ್ದು, ಜಯಂತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಳೆದ 8 ತಿಂಗಳ ಹಿಂದೆ ಜಯಂತ್ ಕೊಡಗಲ್ಲಿ ಹುನ್ನಾರ ಮಾಡಿದ್ರು. ವಿರಾಜಪೇಟೆ, ಕುಶಾಲನಗರ, ಮಡಿಕೇರಿಯಲ್ಲಿ ತಂಡ ಕಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಷಡ್ಯಂತ್ರ ಮಾಡಿದ್ರು. ಈ ಬಗ್ಗೆ ದಾಖಲೆಗಳೂ ಸಿಕ್ಕಿವೆ. ಜೊತೆಗೆ ಯೂಟ್ಯೂಬ್ ಮೂಲಕ ಇಡೀ ರಾಜ್ಯದಲ್ಲಿ ಪ್ರಚಾರ ಮಾಡ್ತಿದ್ರು. ಕೊಡಗು ಎಸ್‌ಪಿ ಭೇಟಿ ಬಳಿಕ ಎಲ್ಲದ್ದಕ್ಕೂ ಕಡಿವಾಣ ಬಿದ್ದಿದ್ದಾಗಿ ಹೇಳಿದ್ದಾರೆ.