Thursday, November 13, 2025

Latest Posts

CM ಮತ್ತು ಪರಮೇಶ್ವರ್ ಸೇರಿ ಹಲವರ ವಿರುದ್ಧ ED ಗೆ ದೂರು!

- Advertisement -

ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಸೂಕ್ತ ಜಾಗವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೀಡಲು ರಾಜ್ಯ ಸಂಪುಟ ಅನುಮೋದನೆ ನೀಡಿದೆ. ಆದರೆ ತುಮಕೂರಿನಲ್ಲಿ ಕಾಂಗ್ರೆಸ್ ಭವನ ಜಾಗದ ಕುರಿತು ವಿವಾದ ತೀವ್ರಗೊಂಡಿದೆ. ನಿಯಮ ಉಲ್ಲಂಘನೆ ಮಾಡಿ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ನಿರ್ಧಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಬಸವರಾಜು ಇಡಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮರುಳೂರು ದಿಣ್ಣೆಯಲ್ಲಿರುವ 87/1 ಮತ್ತು 87/2 ಸರ್ವೆ ಸಂಖ್ಯೆಯ ಅಡಿಯಲ್ಲಿ ಬರುವ 2 ಎಕರೆ ವಿವಾದಿತ ಜಾಗವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಪರಭಾರೆ ಮಾಡಲಾಗಿದೆ. ಈ ಪ್ರಕರಣ ಈಗ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಸಿಎಂ ಸಿದ್ದರಾಮಯ್ಯ, ಸಚಿವ ಜಿ. ಪರಮೇಶ್ವರ್, ಭೈರತಿ ಸುರೇಶ್, ಸಬ್ ರಿಜಿಸ್ಟ್ರಾರ್ ನಂಜೇಶ್ ಮತ್ತು ಪಾಲಿಕೆ ಕಮಿಷನರ್ ಅಶ್ವಿಜಾ ವಿರುದ್ಧ ಬಸವರಾಜು ದೂರು ದಾಖಲಿಸಿದ್ದಾರೆ.

25 ಕೋಟಿ ರೂ. ಮೌಲ್ಯದ ಜಮೀನನ್ನು ಕೇವಲ 17 ಲಕ್ಷ ರೂ.ಗೆ ಪರಭಾರೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದಾಗಿ ನೋಂದಣಿ ಮೌಲ್ಯವನ್ನು ಕಡಿಮೆ ತೋರಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಬಸವರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತ ಸಂಪುಟವು ಈಗಾಗಲೇ ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. ಕೊಪ್ಪಳದಲ್ಲಿ 12 ಎಕರೆ 28 ಗುಂಟೆ ವಿಸ್ತೀರ್ಣದ ಬಡಾವಣೆಯೊಳಗೆ 3749 ಚ.ಮೀ. ನಾಗರಿಕ ಸೌಲಭ್ಯದ ನಿವೇಶನ, ಬಾದಾಮಿಯಲ್ಲಿ 613 ಚ.ಮೀ. ವಿಸ್ತೀರ್ಣದ ಜಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಸಬಾ ಗ್ರಾಮದಲ್ಲಿ 8 ಸೆಂಟ್ ಜಾಗವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಹಸ್ತಾಂತರಿಸಲು ಅನುಮೋದಿಸಲಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss