ಧರ್ಮಸ್ಥಳ ಪ್ರಕರಣವನ್ನೇ ಅಸ್ತ್ರ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು, ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವುದು ಬಿಜೆಪಿಯವರು. ಬುರುಡೆ ಗಿರಾಕಿ ಯಾರು?. ಬಿಜೆಪಿ ಕಾರ್ಯಕರ್ತರಲ್ಲವೇ? ಧರ್ಮಸ್ಥಳಕ್ಕೆ ಅಪಮಾನ ಆಗಿದ್ದರೆ ಅದು ಬಿಜೆಪಿ ನಾಯಕರು ಹಾಗೂ ಅದರ ಸಂಘಟನೆಯವರಿಂದ ಮಾತ್ರ. ಹೀಗಂತ ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ಬಿಜೆಪಿಯ ಎರಡು ಗುಂಪುಗಳ ನಡುವಿನ ತಿಕ್ಕಾಟಕ್ಕೆ, ಧರ್ಮಸ್ಥಳವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಧರ್ಮಸ್ಥಳವನ್ನು ಬಲಿಪಶು ಮಾಡುತ್ತಿದ್ದಾರೆ ಅಂತಾ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ನೇತ್ರಾವತಿ ಅರಣ್ಯದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ, ಮಾಸ್ಕ್‌ಮ್ಯಾನ್ ಹೇಳಿದಂತೆ, ಯಾವುದೇ ಅಸ್ಥಿಪಂಜರ ಸಿಕ್ಕಿರಲಿಲ್ಲ. ಆ ವೇಳೆ ಧರ್ಮಸ್ಥಳವನ್ನ ಅಪವಿತ್ರ ಮಾಡಲಾಗ್ತಿದೆ ಅಂತಾ, ಬಿಜೆಪಿಗರು ಆರೋಪಿಸಿದ್ರು. ಆದ್ರೆ, ಧರ್ಮಸ್ಥಳದ ಬಗ್ಗೆ ಯಾವೊಬ್ಬ ಕಾಂಗ್ರೆಸ್ಸಿಗರು ಕೂಡ, ತುಟಿಕ್‌ಪಿಟಿಕ್ ಎಂದಿರಲಿಲ್ಲ.
ಮೊದಲ ಬಾರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ರು. ಧರ್ಮಸ್ಥಳ ಪ್ರಕರಣದ ಹಿಂದೆ ಷಡ್ಯಂತ್ರ ಮಾಡಲಾಗಿದೆ. ನೂರಾರು ವರ್ಷದಿಂದ ಬಂದ ಪರಂಪರೆಯನ್ನು, ನಾಶ ಮಾಡಲು ಹೊರಟಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ರು. ಆ ವೇಳೆ ಇದನ್ನು ಯಾರು ಮಾಡಿದ್ದಾರೆಂದು ಈಗಲೇ ಹೇಳಲ್ಲ. ಸಮಯ ಬಂದಾಗ ಹೇಳುವುದಾಗಿ, ಹೇಳಿದ್ರು. ಆದ್ರೀಗ ಷಡ್ಯಂತ್ರದ ಹಿಂದೆ ಬಿಜೆಪಿ ಕಾರ್ಯಕರ್ತರೇ ಇರೋದು ಅಂತಾ ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ಒಟ್ನಲ್ಲಿ ಧರ್ಮಸ್ಥಳ ಪ್ರಕರಣ ರಾಜಕೀಯ ನಾಯಕರ ಟೀಕಾಸ್ತ್ರವಾಗಿ ಬಳಕೆಯಾಗ್ತಿರೋದು ವಿಪರ್ಯಾಸ.