ಮಲ್ಲಿಗೆ ಮುಡಿದ ನವ್ಯಾಗೆ ಕಷ್ಟ ₹1.14 ಲಕ್ಷ ದಂಡ! ಯಾಕೆ?

ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆಯಿಂದ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಕೇವಲ 15 ಸೆಂ.ಮೀ ಉದ್ದದ ಜಾಜಿ ಮಲ್ಲಿಗೆ ಕಾರಣದಿಂದ ಆಸ್ಟ್ರೇಲಿಯಾದಲ್ಲಿ ಅವರು ಬರೋಬ್ಬರಿ ₹1.14 ಲಕ್ಷ ದಂಡ ಪಾವತಿಸಬೇಕಾಯಿತು. ಇಲ್ಲವಾದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತಿತ್ತು.

ಹೌದು.. ಓಣಂ ಹಬ್ಬದ ಆಚರಣೆಗೆ ಅತಿಥಿಯಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ತೆರಳಿದ್ದ ನವ್ಯಾ ನಾಯರ್, ತಮ್ಮ ತಂದೆಯ ಸಲಹೆಯಂತೆ ಮಲ್ಲಿಗೆ ಹೂವನ್ನು ಕೊಂಡೊಯ್ದಿದ್ದರು. ಹೂವನ್ನು ಎರಡು ಭಾಗಗಳಲ್ಲಿ ಹಂಚಿಕೊಂಡು, ಒಂದು ಮುಡಿದುಕೊಂಡು, ಮತ್ತೊಂದು ಭಾಗವನ್ನು ಹ್ಯಾಂಡ್ ಬ್ಯಾಗ್‌ನಲ್ಲಿ ಇಟ್ಟಿದ್ದರು. ಆದರೆ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್‌ ಪರಿಶೀಲನೆ ವೇಳೆ ಮಲ್ಲಿಗೆ ಪತ್ತೆಹಚ್ಚಿ ಶಾಕ್ ನೀಡಿದ್ದಾರೆ.

ಆಸ್ಟ್ರೇಲಿಯಾದ ನಿಯಮದ ಪ್ರಕಾರ, ವಿದೇಶದಿಂದ ಹೂವು, ಗಿಡ, ಎಲೆ ಅಥವಾ ಸಸ್ಯ ತರಲು ಮುಂಚಿತವಾಗಿ ಘೋಷಣೆ ನೀಡಬೇಕು. ಆದರೆ ನವ್ಯಾ ನಾಯರ್ ಹೂವು ಇರುವುದನ್ನು ತಿಳಿಸಿರಲಿಲ್ಲ. ಇದರಿಂದ ಅವರು ನಿಯಮ ಉಲ್ಲಂಘಿಸಿದಂತಾಯಿತು.

ಹಾಗಾಗಿ ಕಸ್ಟಮ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿ, ಗರಿಷ್ಠ AUD 6,600 ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹1.14 ಲಕ್ಷ ದಂಡವನ್ನು ವಿಧಿಸಿದರು. ದಂಡ ಪಾವತಿಸಲು 28 ದಿನಗಳ ಅವಧಿ ನೀಡಲಾಗಿತ್ತು. ಪಾವತಿಸದಿದ್ದರೆ ಜೈಲು ಶಿಕ್ಷೆ ಅನುಭವಿಸಬೆಕಾಗಿತ್ತು.

ಇತ್ತ ನವ್ಯಾ ನಾಯರ್ ತಮ್ಮ ಅನುಭವವನ್ನು ಹಂಚಿಕೊಂಡು, ನನಗೆ ಈ ನಿಯಮದ ಬಗ್ಗೆ ಅರಿವು ಇರಲಿಲ್ಲ. ಅದಕ್ಕಾಗಿ ದಂಡ ಪಾವತಿಸಬೇಕಾಯಿತು. ಇದು ನನಗೆ ಒಂದು ದೊಡ್ಡ ಪಾಠವಾಗಿದೆ ಎಂದು ಹೇಳಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author