ಮದ್ದೂರಿನಲ್ಲಾದ ಕಲ್ಲು ತೂರಾಟ ಪ್ರಕರಣಕ್ಕೆ, ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ್ಮೇಲೆ, ರಾಜ್ಯದಲ್ಲಿ ಹಿಂದೂಗಳಿಗೆ ಗ್ರಹಣ ಹಿಡಿದಿದೆ. ಧರ್ಮಸ್ಥಳ ಆಯ್ತು. ಚಾಮುಂಡೇಶ್ವರಿ ಆಯ್ತು. ಕಳೆದ ಬಾರಿಯೂ ನಾಗಮಂಗಲದಲ್ಲಿ ಗಲಾಟೆ ಆಯ್ತು. ಈಗ ಮದ್ದೂರಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಮದ್ದೂರಿನಲ್ಲಿ, ಮಸೀದಿಯಲ್ಲಿ, ಧರ್ಮಾಂಧರು ಇದ್ದಾರೆ ಅನ್ನೋ ಜ್ಞಾನ ಬೇಡ್ವಾ? ಇಂದು ಪೊಲೀಸರಿಂದ ಲಾಠಿ ಚಾರ್ಜ್, ರೂಟ್ ಮಾರ್ಚ್ ಬೇಕಾಗಿತ್ತಾ? ಮೊದಲೇ ಎಚ್ಚರವಾಗಿ ಇರಬೇಕಿತ್ತು.
ಕಲ್ಲು ತೂರಾಟ ಮಾಡಿದವರನ್ನು ಏನೂ ಮಾಡಿಲ್ಲ. ಅವರನ್ನು ಕರೆದುಕೊಂಡು ಹೋಗಿ ಬಿರಿಯಾನಿ ಕೊಡಿಸಿ, ಕಬಾಬ್ ಕೊಡಿಸಿ, ಬೇಲ್ ಕೊಡಿಸಿ ಮನೆಗೆ ವಾಪಸ್ ಕಳಿಸ್ತಾರೆ. ಇದನ್ನ ಬರೆದಿಟ್ಟುಕೊಳ್ಳಿ. ಸಿದ್ದರಾಮಯ್ಯ ಇದಕ್ಕಾಗಿ ಒಂದು ಟೀಮ್ ಇಟ್ಟಿದ್ದಾರೆ. ಬೇಲ್ ಕೊಡಿಸೋಕೆ, ಕಳಿಸೋಕೆ ತಂಡ ಇಟ್ಟಿದ್ದಾರೆ. ಸರ್ಕಾರ, ಸಿದ್ದರಾಮಯ್ಯನವರ ಗ್ಯಾಂಗೇ ಇದನ್ನೆಲ್ಲಾ ಮಾಡ್ತಿದೆ ಅಂತಾ, ಆರ್. ಅಶೋಕ್ ಗುಡುಗಿದ್ದಾರೆ.
ಇವರನ್ನು ಬಿಡಿಸಿಕೊಂಡು ಬರೋದಕ್ಕಾಗಿಯೇ ಒಂದು ಗ್ಯಾಂಗ್ ಇದೆ. ಅವರ ಕೇಸ್‌ಗಳನ್ನು ವಾಪಸ್ ಪಡೆಯುತ್ತಾರೆ. ನಮ್ಮಿಂದಲೇ ಸಿದ್ದರಾಮಯ್ಯ ಅಂತಾ ಅವರೇ ಹೇಳ್ತಾರಲ್ಲ. ನಾವು ಹೇಳಿದಂತೆ ಕೇಳ್ಬೇಕು ಅಂತಾ ಹೇಳ್ತಾರೆ. ಕಲಬುರಗಿ, ಬೀದರ್‌ನಲ್ಲೆಲ್ಲಾ ಮುಸ್ಲಿಂ ಸಮುದಾಯದವರೇ, ಬಹಿರಂಗವಾಗಿ ಹೇಳಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಅವರನ್ನು ಏನೂ ಮಾಡುವುದಿಲ್ಲ. ವೋಟ್ ಹಾಕಿ ಸಾಕು ಅಂತಾ ಹೇಳ್ತಾರೆ.
ಕರ್ನಾಟಕದ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ ಇದು. ಧರ್ಮಸ್ಥಳದ ಪರ ಹೋರಾಟ ಮಾಡುತ್ತಿರುವಂತೆಯೇ, ಈ ವಿಚಾರದ ಬಗ್ಗೆಯೂ ಹೋರಾಟ ಮಾಡ್ತೀವಿ. ಹಿಂದೂಗಳ ರಕ್ಷಣೆಯನ್ನೂ ಮಾಡ್ತೀವಿ. ಸಿದ್ದರಾಮಯ್ಯ, ಕಾಂಗ್ರೆಸ್ ನಂಬಿಕೊಂಡರೆ ಉದ್ಧಾರ ಆಗಲ್ಲ. ನಾನು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ. ಹಿಂದೂಗಳು ರಾಜಕೀಯ ನೋಡದೆ ಒಗ್ಗಟ್ಟಾಗಿರಬೇಕು ಅಂತಾ, ಅಶೋಕ್ ಕರೆ ಕೊಟ್ಟಿದ್ದಾರೆ.
ಹಿಂದೂಗಳೆಲ್ಲಾ ಧರ್ಮಸ್ಥಳ ವಿಚಾರ, ಚಾಮುಂಡೇಶ್ವರಿ ವಿಚಾರದಲ್ಲಿ ನಮ್ಮ ಜೊತೆ ಇರಬೇಕು. ಆದ್ರೆ, ಅವರ ಮುಖಂಡರು ಬೈತಾರೆ ಅಂತಾ ನಮ್ಮ ಜೊತೆ ಬರಲ್ಲ. ಮಂಡ್ಯ-ಮೈಸೂರು ಜನರು ಅರ್ಥ ಮಾಡಿಕೊಳ್ಳಬೇಕು. ಒಗ್ಗಟ್ಟಾಗಬೇಕಿದೆ ಅಂತಾ ಆರ್. ಅಶೋಕ್ ಹೇಳಿದ್ರು.