ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಗಣೇಶ ಗಲಾಟೆ, ಪೊಲೀಸರ ಲಾಠಿಚಾರ್ಜ್ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಳೆದ ವರ್ಷವೂ ಸಹ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕಲ್ಲು ತೂರಾಟ ಆಗಿತ್ತು. ಮೊದಲ ಬಾರಿ ನಾಗಮಂಗಲದಲ್ಲಿ ಆಗಿದ್ದು ಈಗ ಮದ್ದೂರಿನಲ್ಲಿ ಪುನಾರವರ್ತನೆ ಆಗಿದೆ. ನಾನು ಜಿಲ್ಲೆ ಜನತೆ ಮತ್ತು ಮದ್ದೂರಿನಲ್ಲಿ ವಿಶೇಷವಾಗಿ ಮನವಿ ಮಾಡುವುದೇನೆಂದರೆ, ಈ ಪ್ರಕರಣವನ್ನ ದೊಡ್ಡ ಮಟ್ಟದಲ್ಲಿ ಹಿಂಸೆಗೆ ಒಳಾಗಾಗುವ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಕೊಡಬೇಡಿ.
ಕರ್ನಾಟಕ ಸರ್ವಾ ಜನಾಂಗ ಶಾಂತಿಯ ತೋಟ ಎಂದು ಹೇಳ್ತೀವಿ. ಆದರೆ ಆ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಎಂದೂ ಸಹ ಆಗುತ್ತಿರಲಿಲ್ಲ. ಮಂಡ್ಯ ಜನ ಶಾಂತಿಯ ಜೀವನ ನಡೆಸುವವರು. ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಪ್ರಕರಣಗಳು ಗಂಭೀರ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತವೆ, ನಿಮ್ಮಲ್ಲಿ ಮನವಿ ಮಾಡುತ್ತೇನೆ ದಯವಿಟ್ಟು ಅದಕ್ಕೆ ಅವಕಾಶ ಕೊಡಬೇಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ನಮ್ಮ ಜಿಲ್ಲೆ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಈ ರೀತಿ ಪ್ರಕರಣಗಳು ಆಗುತ್ತಿರುವುದಕ್ಕೆ ಮೂಲ ಕಾರಣ ಕಾಂಗ್ರೆಸ್‌ನ ಆಡಳಿತ ನಡವಳಿಕೆ. ಇವತ್ತು ಕಾಂಗ್ರೆಸ್‌ನ ಆಡಳಿತದಲ್ಲಿ ಹಿಂದೂ ಸಮಾಜವನ್ನು ಒಂದು ಅಸಮಾಧಾನಕ್ಕೆ ಒಳಾಗಾಗುವ ಹಾಗೇ ನಿರ್ಮಾಣ ಮಾಡುತ್ತಿದ್ದಾರೆ. ಸಮಾಜದಲ್ಲಿ ಇವತ್ತು ದೊಡ್ಡ ಮಟ್ಟದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವುದಕ್ಕೆ ಪ್ರೇರೆಪಣೆ ಇದೇ. ಅದೇ ಕಾಂಗ್ರೆಸ್ ಪಕ್ಷದ ಪ್ರೇರಪಣೆಗಳು.
ನಮ್ಮ ಹಿಂದೂ ಸಮಾಜದಲ್ಲಿ ಕಾಂಗ್ರೆಸ್ ನಡವಳಿಕೆಯಿಂದ, ಯುವಕರು, ಬಂಧುಗಳು ಒಂದು ಕಡೆಯಾದರೆ. ಇಂತಹ ಪರಿಸ್ಥಿತಿಯಲ್ಲಿ ಈ ಕಲ್ಲು ತೂರಾಟ ಮಾಡುವ ಹಿನ್ನಲೆ ಒಂದು ಸಂಘರ್ಷಕ್ಕೆ, ಈ ಎರಡು ಸಮಾಜವನ್ನು ದೂಡುವುದಕ್ಕೆ ಮೂಲ ಕಾರಣ ಕಾಂಗ್ರೆಸ್ ಆಗಿದೆ. ನಾವು ರಾಜಕೀಯ ಮಾಡುವುದಕ್ಕೆ ಈ ಹೇಳಿಕೆಗಳನ್ನು ಕೊಡುತ್ತಿಲ್ಲ. ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ವಾತಾವರಣ ನೋಡಿದಾಗ, ಹಿಂದೆ ಗಣೇಶನ ಉತ್ಸವದಲ್ಲಿ ಸಣ್ಣ ಪುಟ್ಟ ಗಲಾಟೆಗಳಿತ್ತು. ಆದರೆ, ಈಗ ರಾಜ್ಯದ ಮೂಲೆ ಮೂಲೆಯಲ್ಲಿ ಈ ರೀತಿಯ ವಾತಾವರಣ ನಿರ್ಮಾಣ ಆಗುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಕಿಡಿಕಾರಿದರು.
ಮದ್ದೂರಿನಲ್ಲಿ ಸಾವಿರಾರು ಜನ ಸೇರಿದ್ದಾರೆ. ಅದು ಕಾಂಗ್ರೆಸ್ ಪತನಕ್ಕೆ ಯಾವ ರೀತಿ ದಾರಿ ಮೂಡುತ್ತಿದೆ ಅನ್ನೊದಕ್ಕೆ ಉದಾಹರಣೆ. ಈ ಘಟನೆಯಿಂದ ಮದ್ದೂರಿನ ಜನತೆ, ಇಡೀ ರಾಜ್ಯದ ಜನತೆ ಪ್ರತಿಭಟನೆ ಏನಿದೆ. ಇದೆಲ್ಲವನ್ನೂ ನೋಡಿದಾಗ ಕಾಂಗ್ರೆಸ್ ಪಕ್ಷದ ಅವನತಿ ಪ್ರಾರಂಭವಾಗುತ್ತಿದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಅರ್ಥಮಾಡಿಕೊಳ್ಳದಿದ್ದರೆ, ರಾಜ್ಯದ ಜನ ಸಂಪೂರ್ಣವಾಗಿ ಪತನ ಮಾಡುತ್ತದೆ ಅನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಇನ್ನು ಯಾವುದೇ ಒತ್ತಡಕ್ಕೆ ಮಣಿದರೆ ಖುದ್ದಾಗಿ ನಾನೇ ಮದ್ದೂರಿಗೆ ಬರಬೇಕಾಗುತ್ತದೆ ಎಂದು ಮಂಡ್ಯ ಎಸ್ಪಿಗೆ ಕರೆ ಮಾಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಮಂಡ್ಯ ಎಸ್ಪಿ ಹಾಗೂ ಡಿಸಿಗೆ ಕರೆ ಮಾಡಿ ಮಾತನಾಡಿದ್ದೇನೆ ಎಂದರು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿದರೆ ಖುದ್ದಾಗಿ ನಾನೇ ಮದ್ದೂರಿಗೆ ಬರಬೇಕಾಗುತ್ತದೆ ಎಂದು ಹೇಳಿದ್ದೇನೆ ಎಂದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

