ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮರೂರ ಬಳಿ ಗುರುವಾರ ಸಂಭವಿಸಿದ ದಾರುಣ ಘಟನೆ ಒಂದೇ ಕುಟುಂಬದ ನಾಲ್ವರು ಸದಸ್ಯರ ಜೀವಹಾನಿಗೆ ಕಾರಣವಾಗಿದೆ. ಕಾರಂಜಾ ಜಲಾಶಯದ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಈ ಕುಟುಂಬದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಪಾರು ಆಗಿದ್ದಾರೆ.
ಮೃತರು ಮೈಲೂರಿನ ನಿವಾಸಿಗಳಾದ ಶಿವಮೂರ್ತಿ (45), ಅವರ ಮಕ್ಕಳು ಶ್ರೀಕಾಂತ್ (8), ಹೃತಿಕ್ (4), ಮತ್ತು ಏಳು ತಿಂಗಳ ಮಗು ರಾಕೇಶ್ ಎಂದು ಗುರುತಿಸಲಾಗಿದೆ. ತಾಯಿ ರಮಾಬಾಯಿ (42) ಹಾಗೂ ಮತ್ತೊಬ್ಬ ಮಗ ಶ್ರೀಕಾಂತ್ (7) ಅವರನ್ನು ಸ್ಥಳೀಯರು ಸಹಾಯದಿಂದ ಕಾಲುವೆಯಿಂದ ಜೀವಂತವಾಗಿ ಹೊರತೆಗೆಯಲಾಗಿದೆ.
ಮೂಲಗಳ ಪ್ರಕಾರ, ಸಾಲಬಾಧೆಯಿಂದ ನೊಂದು ಈ ದಂಪತಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಮುಂದಾಗಿರಬಹುದೆಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಧನ್ನೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ನಂತರ ಸಚಿವ ಈಶ್ವರ್ ಖಂಡ್ರೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಈ ಘಟನೆಯು ಜಿಲ್ಲೆಯಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದ್ದು, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ ಮೇಲೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ.
ವರದಿ: ಲಾವಣ್ಯ ಅನಿಗೋಳ