ಭಾರತದ ಮುಂದಿನ ಉಪರಾಷ್ಟ್ರಪತಿ ಯಾರು ಅಂತ ಇಡೀ ದೇಶವೇ ಎದುರು ನೋಡುತ್ತಿದೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದ್ರೆ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವೀಲ್ ಚೇರ್‌ನಲ್ಲಿ ಆಗಮಿಸಿ ಮತದಾನ ಮಾಡಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಆತ್ಮೀಯವಾಗಿ ಬಂದು ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.
ಆದ್ರೆ ಇದೀಗ ಭಾರತದ ನೂತನ ಉಪರಾಷ್ಟ್ರಪತಿ ಯಾರು ಅನ್ನೋದು ಹೊರ ಬಿದ್ದಿದೆ. ಹೌದು ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಇಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ. ಸುದರ್ಶನ ರೆಡ್ಡಿ ವಿರುದ್ಧ 452 ಮತಗಳ ಭರ್ಜರಿ ಅಂತರದಿಂದ ಜಯ ಸಾಧಿಸಿದರು.
ಈ ಬಾರಿಗೆ ಒಟ್ಟು 781 ಸಂಸದೀಯ ಮತಗಳಲ್ಲಿ 768 ಮತಗಳು ಚಲಾಯಿಸಲ್ಪಟ್ಟಿದ್ದು, ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ 452 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಕೇವಲ 300ಕ್ಕೂ ಕಡಿಮೆ ಮತಗಳು ಲಭಿಸಿವೆ ಎಂದು ವರದಿಗಳಲ್ಲಿದೆ.
ಬಿಜೆಪಿ ನೇತೃತ್ವದ ಎನ್‌ಡಿಎಗೆ ಸಂಸತ್ತಿನಲ್ಲಿ ಸುಮಾರು 427 ಮತಗಳ ಬೆಂಬಲವಿರುವುದಾದರೂ, ರಾಧಾಕೃಷ್ಣನ್ ಅವರು 452 ಮತಗಳನ್ನು ಪಡೆದು ಅಧಿಕ ಮತವನ್ನ ಸೆಳೆದುಕೊಂಡಿದ್ದಾರೆ ಎನ್ನುವುದು ವಿಶೇಷ. ಈ ಚುನಾವಣೆ ಹಿನ್ನೆಲೆಯಲ್ಲಿ BJD ಹಾಗೂ BRS ಪಕ್ಷಗಳು ಮತದಾನದಿಂದ ದೂರವಿದ್ದರೆ, ಒಟ್ಟು 13 ಸಂಸದರು ಮತದಾನಕ್ಕೆ ಗೈರಾಗಿದ್ದರು.
ಈ ಚುನಾವಣೆಯು ಜಗದೀಪ್ ಧನ್ಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆದಿದ್ದು, ಎರಡು ಪ್ರಮುಖ ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯಿತು. ಆದರೆ ಕೆಲ ಇಂಡಿಯಾ ಮೈತ್ರಿಕೂಟದ ಸದಸ್ಯರು ಎನ್‌ಡಿಎ ಅಭ್ಯರ್ಥಿಗೆ ಮತ ನೀಡಿದ ಕಾರಣದಿಂದಾಗಿ, ಮೈತ್ರಿಕೂಟಕ್ಕೆ ಭಾರಿ ಮುಖಭಂಗ ಸಂಭವಿಸಿದೆ.
ಸಿಪಿ ರಾಧಾಕೃಷ್ಣನ್ ಅವರು ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ರಾಜಕಾರಿಯಾಗಿದ್ದು, ಅವರ ಆಯ್ಕೆಗೆ ದೇಶಾದ್ಯಂತದಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.
ವರದಿ : ಲಾವಣ್ಯ ಅನಿಗೋಳ